ಮಂಗಳೂರು: ಪ್ರಾಜೆಕ್ಟ್ ರೆಕಾರ್ಡ್ ತಿರಸ್ಕರಿಸಿದ ಉಪನ್ಯಾಸಕ; ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು: ಉಪನ್ಯಾಸಕರು ತನ್ನ ಪ್ರಾಜೆಕ್ಟ್ ದಾಖಲೆಯನ್ನು ತಿರಸ್ಕರಿಸಿದ, ಪರೀಕ್ಷೆಗೆ ಹಾಜರಾಗಲು ಅನುಮತಿಸುವುದಿಲ್ಲ ಎಂದು ಹೇಳಿದ ನಂತರ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಂಗಳೂರಿನ ಕೊಟ್ಟಾರ ಬಳಿಯ ಪಿಜಿಯಲ್ಲಿ ನಡೆದಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಮೂಲದ ಭರತ್ ಭಾಸ್ಕರ್ (20) ಎಂಬ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ. ಅವರು 2020-21 ರಲ್ಲಿ ಕಾಲೇಜಿಗೆ ಪ್ರವೇಶದ ಸಮಯದಲ್ಲಿ ರೂ 60,000 ದೇಣಿಗೆ ಮತ್ತು ರೂ 70,000 ಬೋಧನಾ ಶುಲ್ಕವನ್ನು ಪಾವತಿಸಿದ್ದರು. 2021-22ರಲ್ಲಿ ಮತ್ತೆ 25,000 ರೂ. ಶುಲ್ಕ ಕಟ್ಟಿರುವುದಾಗಿ ಮೃತ ವಿದ್ಯಾರ್ಥಿ ಪೋಷಕರು ಹೇಳಿದ್ದಾರೆ.

ಕರಾವಳಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಓದುತ್ತಿದ್ದ ವಿದ್ಯಾರ್ಥಿ ಭರತ್, ಕಾಲೇಜು ಸರಿಯಿಲ್ಲ, ಕಾಲೇಜಿಗೆ ಬೋಧಕರು ಸರಿಯಾಗಿ ಬರುತ್ತಿಲ್ಲ. ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಆತ್ಮಹತ್ಯೆಗೆ ಶರಣಾಗಿದ್ದು ಪ್ರಕರಣ ದಾಖಲಾಗಿದೆ. ಕಾಲೇಜು ಮಾಲೀಕ ಗಣೇಶ್ ರಾವ್, ಪ್ರಾಧ್ಯಾಪಕ ರಾಹುಲ್ ಮೇಲೆ ದೂರು ದಾಖಲಾಗಿದೆ. ಇಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸಾಪ್ ಮೆಸೇಜ್ ಮೂಲಕ ಡೆತ್ ನೋಟ್ ಕಳಿಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಭರತ್ ತನ್ನ ತಾಯಿಗೆ ವಾಟ್ಸಪ್ ಮೆಸೇಜ್ ಕಳುಹಿಸಿದ್ದು, “ಕಾಲೇಜು ಸರಿ ಇಲ್ಲ, ಸರಿಯಾದ ಪ್ರಾಧ್ಯಾಪಕರಿಲ್ಲ, ಇಲ್ಲಿ ಬದುಕಲು ಸಾಧ್ಯವಿಲ್ಲ’, ಪ್ರಾಜೆಕ್ಟ್ ರಿಪೋರ್ಟ್ ಸರಿ ಇಲ್ಲ ಅಂತ ಪ್ರಾಧ್ಯಾಪಕ ರಾಹುಲ್ ಪರೀಕ್ಷೆ ಕೂರಲು ಬಿಡಲ್ಲ ಅಂದಿದ್ದಾರೆ. ಡೊನೇಶನ್ ಪಡೆದರೂ ಸರಿಯಾದ ಊಟ ಇಲ್ಲ, ಹಾಸ್ಟೆಲ್ ಇಲ್ಲ. ನೀವು ಮತ್ತು ಅಪ್ಪ ಸಾಕಷ್ಟು ಡೊನೇಶನ್ ಕೊಟ್ಟಿದ್ದಾರೆ. ಆದರೆ ಕಾಲೇಜು ಕೇವಲ ಹಣ ಅಷ್ಟೇ ತೆಗೋತಿದೆ. ನೀವು ಸುಮ್ಮನೆ ಹಣ ಕೊಡೋದು ನನಗೆ ಇಷ್ಟವಿಲ್ಲ. ಹಾಗಾಗಿ ಸಾಯುತ್ತಿದ್ದೇನೆ. ನಾನು ಸತ್ತ ಮೇಲೆ ಪೊಲೀಸ್ ದೂರಿನಲ್ಲಿ ಇದನ್ನ ಉಲ್ಲೇಖಿಸಿ ಎಂದು ತಾಯಿಗೆ ಕಳುಹಿಸಿದ ಮೆಸೇಜ್ ನಲ್ಲಿ ತಿಳಿಸಿದ್ದಾನೆ.

ಸದ್ಯ ಪೋಷಕರ ದೂರಿನ ಹಿನ್ನೆಲೆಯಲ್ಲಿ ಕಾಲೇಜು ಆಡಳಿತದ ವಿರುದ್ದ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರಾವಳಿ ಕಾಲೇಜು ಚೇರ್ ಮೆನ್ ಗಣೇಶ್ ರಾವ್ ಮತ್ತು ಲೆಕ್ಚರರ್ ರಾಹುಲ್ ವಿರುದ್ದ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸ್ಟೆಲ್ ನಲ್ಲಿ ಊಟೋಪಾಚಾರ ಸರಿ ಇಲ್ಲದೇ ಮಗ ಪಿಜಿಯಲ್ಲಿ ವಾಸವಾಗಿದ್ದ. ಮನೆಗೆ ಬಂದಾಗಲೆಲ್ಲಾ ಕಾಲೇಜು ಸರಿ ಇಲ್ಲ ಎನ್ನುತ್ತಿದ್ದ. ಅಲ್ಲಿನ ಲೆಕ್ಚರರ್ ರಾಹುಲ್ ಮನಸ್ಸಿಗೆ ನೋವಾಗುವಂತೆ ಅವಮಾನ ಮಾಡುವುದು ಹಾಗೂ ಪೋಷಕರು ಕರೆ ಮಾಡಿದಾಗಲೂ ದರ್ಪದಿಂದ ಮಾತನಾಡುತ್ತಿದ್ದ.

ಹೀಗೆ ಕಾಲೇಜು ಕಿರುಕುಳದಿಂದ ಬೇಸತ್ತು ಮಗ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ಕಾರಣವಾದ ಪ್ರಾಧ್ಯಾಪಕ ರಾಹುಲ್ ಮತ್ತು ಸರಿಯಾದ ಶಿಕ್ಷಣ ನೀಡದೇ ಹಣವನ್ನು ಡೊನೇಶನ್ ರೂಪದಲ್ಲಿ ಪಡೆಯುವ ಕರಾವಳಿ ಕಾಲೇಜು ಚೇರ್ ಮ್ಯಾನ್ ಗಣೇಶ್ ರಾವ್ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮೃತ ವಿದ್ಯಾರ್ಥಿ ಭರತ್ ತಂದೆ ಭಾಸ್ಕರ್ ಉರ್ವಾ ಪೊಲೀಸರಿಗೆ ದೂರು ನೀಡಿದ್ದಾರೆ.

Latest Indian news

Popular Stories