ಮಾದರಿ ಯೋಗ್ಯ ಬಂದ್ ಆಚರಣೆ; ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ

ಉಡುಪಿ: ಹಿಜಾಬ್’ನ ಕುರಿತು ಉಚ್ಚ ನ್ಯಾಯಾಲಯ ನೀಡಿದ ನಿರಾಶಾದಾಯಕ ತೀರ್ಪು ಮುಸ್ಲಿಮ್ ಸಮುದಾಯದ ಸಂವಿಧಾನ ಬದ್ಧ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕಿಗೆ ಪುರಸ್ಕಾರ ನೀಡದೆ “ಸರಕಾರ ಮನಸೋ ಇಚ್ಛೆ ತೆಗೆದುಕೊಂಡ ನಿರ್ಣಯ”ಕ್ಕೆ ಒಪ್ಪಿಗೆ ಸೂಚಿಸಿದಹಾಗಿದೆ ಹಾಗೂ ಹಿಜಾಬ್ ಬಗ್ಗೆ ಇಸ್ಲಾಮಿನ ಮಾರ್ಗದರ್ಶಿ ಸೂತ್ರಗಳಿಗೆ ಸರಿ ಹೊಂದಿರದ ವ್ಯಾಖ್ಯಾನವನ್ನೂ ನೀಡಿದೆ. ಆದ್ದರಿಂದ ತಮ್ಮ ನಿರಾಶೆ ಮತ್ತು ಅಸಮ್ಮತಿ ಪ್ರಕಟಿಸುವುದಕ್ಕಾಗಿ ಇಂದು ರಾಜ್ಯಮಟ್ಟದ ಬಂದ್’ಗೆ ಮುಸ್ಲಿಮ್ ಸಂಘಟನೆಗಳು ಕರೆ ನೀಡಿದ್ದವು. ಈ ಕರೆಗೆ ಓಗೊಟ್ಟು ಸಮುದಾಯ ಬಾಂಧವರು ಹಾಗೂ ಇತರ ಸಮಾನ ಮನಸ್ಕರು ತಮ್ಮ ವ್ಯಾಪಾರ ವಹಿವಾಟುಗಳನ್ನು ಮುಚ್ಚಿ ಇಂದಿನ ಬಂದ್’ಗೆ ಬೆಂಬಲ ನೀಡಿ ಯಶಸ್ವಿಗೊಳಿಸಿದ್ದಾರೆ.

ಮೊದಲೇ ಸೂಚಿಸಿದಂತೆ ಈ ಬಂದ್ ಯಾರ ವಿರುದ್ಧವು ಆಗಿರಲ್ಲಿಲ್ಲ. ಬಂದ್ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯದೆ, ಈ ಬಂದ್ ಸತ್ಯ ಹಾಗೂ ಸಾಂವಿಧಾನಿಕ ಸ್ಪೂರ್ತಿಯ ನ್ಯಾಯಕ್ಕಾಗಿ ಆಗ್ರಹಿಸುವ ಒಂದು ಸತ್ಯಾಗ್ರಹವಾಗಿತ್ತು. ತಮಗಾಗಿರುವ ನೋವನ್ನು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯದಿರುವ ಮೂಲಕ ಸಮುದಾಯ ವ್ಯಕ್ತಪಡಿಸಿದೆ. ಇದು ಬೀದಿಗಿಳಿಯದೆ, ಘೋಷಣೆಗಳ ಆಡಂಬರವಿಲ್ಲದೆ, ಬಂದ್’ಗೆ ಸೇರಿಕೊಂಡು ಬೆಂಬಲಿಸುವಂತೆ ಬಲವಂತ ಮಾಡದ ಬಂದ್ ಆಗಿತ್ತು. ಗೊಂದಲ ಸೃಷ್ಟಿಯೇ ಬಂದ್ ಎಂಬಂತೆ ನಡೆಸಲ್ಪಡುವ ಸಾಮಾನ್ಯ ಬಂದ್’ಗಳಿಗೆ ವ್ಯತಿರಿಕ್ತವಾಗಿ ವ್ಯವಸ್ಥೆಯ ನಿಲುವುಗಳಿಗೆ ಅಸಮ್ಮತಿಯನ್ನು ಮಾದರಿ ಯೋಗ್ಯವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಇಬ್ರಾಹಿಮ್ ಸಾಹೇಬ್ ಕೋಟ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

Latest Indian news

Popular Stories