ರಾಜ್ಯ ಉಗ್ರರ ಸ್ಲಿಪರ್ ಸೆಲ್ ಆಗಲು ಬಿಡುವುದಿಲ್ಲ – ಬಸವರಾಜ್ ಬೊಮ್ಮಾಯಿ

ಹುಬ್ಬಳ್ಳಿ : ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಹಾಗೂ ಉಗ್ರರು ನೆಲೆಗೊಳ್ಳಲು ಅವಕಾಶ ನೀಡದಂತೆ ರಾಜ್ಯದ ಪೊಲೀಸರು ತೀವ್ರ ನಿಗಾವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಎನ್ ಐಎ ಜತೆ ಸೇರಿ ರಾಜ್ಯ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಕರಾವಳಿ ಹಾಗೂ ಅರಣ್ಯ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಲಾಗುತ್ತದೆ. ಉಗ್ರ ಸಂಘಟನೆಗಳು ರಾಜ್ಯವನ್ನು ಸ್ಲೀಪರ್ ಸೆಲ್ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು.

ಉಗ್ರ ಚಟುವಟಿಕೆ ಗಳಲ್ಲಿ ತೊಡಗಿದ ಶಂಕೆ ಮೇರೆಗೆ ಕೆಲವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ದೇಶ ವಿರೋಧಿ ಕಾರ್ಯಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು. ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಗುರುವಾರ ನಗರಕ್ಕೆ ಬರುತ್ತಿದ್ದಾರೆ. ಅವರೊಂದಿಗೆ ರಾಜ್ಯದ ಹಲವಾರು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಗುವುದು. ಸಚಿವರು ನಗರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಗಣೇಶೋತ್ಸವ ಆಚರಣೆ ಕುರಿತು ಈಗಾಗಲೇ ಹೇಳಿದಂತೆ ಸೆ. 5ರಂದು ತಜ್ಞರು ವರದಿ ಸಲ್ಲಿಸುತ್ತಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವಿಭಿನ್ನವಾಗಿ ಹಬ್ಬ ಆಚರಿಸಲಾಗುತ್ತದೆ. ತಜ್ಞರು ಸಹ ಆಯಾ ಜಿಲ್ಲೆಯಲ್ಲಿ ವರದಿ ಸಲ್ಲಿಸಲು ಕಾಲಾವಕಾಶ ಕೇಳಿದ್ದಾರೆ. ಕಳೆದ ವರ್ಷ ಯಾವ ರೀತಿ ನಿಯಮನುಸಾರ ಆಚರಿಸಲಾಗಿತ್ತು ಅದೇ ರೀತಿ ಈ ವರ್ಷವು ಕಟ್ಟುನಿಟ್ಟಿನ ಕ್ರಮಗಳ ಮೂಲಕ ಆಚರಿಸಲು ಅನುಮತಿ ನೀಡಲಾಗುತ್ತದೆ ಎಂದರು.

Latest Indian news

Popular Stories