ಸಚಿವರ ರಾಜೀನಾಮೆ ಪತ್ರ ರಾಜ್ಯಪಾಲರಿಗೆ ವರ್ಗ, ನಿರ್ದೋಷಿಯಾಗಿ ಹೊರಗೆ ಬರ್ತೀನಿ ಎಂದ ಈಶ್ವರಪ್ಪ!

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಮಾಡಿದ್ದ ಕಮೀಷನ್ ಆರೋಪದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ನೀಡಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದು, ರಾಜ್ಯಪಾಲರಿಗೆ ಕಳುಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಈಶ್ವರಪ್ಪ ಅವರಿಂದ ರಾಜೀನಾಮೆ ಪತ್ರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ರಾಜೀನಾಮೆ ಪತ್ರವನ್ನು ತಾನು ಅಂಗೀಕರಿಸಿದ್ದು, ಮುಂದಿನ ಕ್ರಮವಾಗಿ ರಾಜ್ಯಪಾಲರಿಗೆ ಕಳುಹಿಸುವುದಾಗಿ ತಿಳಿಸಿದರು.

ಇದೇ ವೇಳೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ತಮ್ಮ ಮೇಲಿನ ಆರೋಪದಿಂದ ನಿರ್ದೋಷಿಯಾಗಿ ಹೊರಗೆ ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಮೇಲಿರುವ ಆರೋಪ, ಷಡ್ಯಂತ್ರ ಕುರಿತಂತೆ ಕೂಲಂಕುಷವಾಗಿ ತನಿಖೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.

ತಾನೂ ಯಾವುದೇ ತಪ್ಪು ಮಾಡಿಲ್ಲ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಈ ಬಗ್ಗೆ ಅನೇಕರು ಫೋನ್ ಮಾಡಿ ಹೇಳುತ್ತಿದ್ದಾರೆ. ಡೆತ್ ನೋಟ್ ಬಗ್ಗೆಯೂ ಅನುಮಾನವಿದೆ. ಇವೆಲ್ಲದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆದು, ಈ ಷಡ್ಯಂತ್ರ್ಯದ ಹಿಂದಿರುವ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕಿದೆ ಎಂದರು.

ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಈಶ್ವರಪ್ಪ, ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ. ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಮುಂದಿನ ದಿನಗಳಲ್ಲಿ ಅದು ಕೂಡಾ ನಿಲ್ಲಲಿದೆ. ಅಧಿಕೃತ ವಿಪಕ್ಷ ಸ್ಥಾನವನ್ನು ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

Latest Indian news

Popular Stories