ಕೇಜ್ರಿವಾಲ್‌ ಜಾಮೀನು ಅರ್ಜಿ: 7ಕ್ಕೆ ವಿಚಾರಣೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇದೇ 7ರಂದು ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತಿಳಿಸಿತು.

ಲೋಕಸಭೆಯ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಕುರಿತ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬಹುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ದೀಪಂಕರ್‌ ದತ್ತ ಅವರ ಪೀಠ ಹೇಳಿತು.
ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವ ಕುರಿತು ಮಂಗಳವಾರ ನಿಮ್ಮನ್ನು ನಾವು ಪ್ರಶ್ನಿಸಬಹುದು. ಆದ್ದರಿಂದ ಜಾಮೀನು ಷರತ್ತುಗಳನ್ನು ಸಿದ್ಧಪಡಿಸಿಕೊಂಡು ಬನ್ನಿ’ ಎಂದು ಪೀಠವು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಅವರಿಗೆ ಸೂಚಿಸಿತು.

ಕೇಜ್ರಿವಾಲ್‌ ಅವರು ಹೊಂದಿರುವ ಸ್ಥಾನದ ಕಾರಣದಿಂದ, ಅವರು ಅಧಿಕೃತ ಕಡತಗಳಿಗೆ ಸಹಿ ಹಾಕಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದನ್ನೂ ಇದೇ ವೇಳೆ ಪರಿಶೀಲಿಸಲಾಗುವುದು ಎಂದು ಪೀಠ ತಿಳಿಸಿತು. ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ವೇಳೆ ಎರಡೂ ಕಡೆಯವರ ವಾದ, ಪ್ರತಿವಾದಗಳನ್ನು ಪೂರ್ಣವಾಗಿ ಆಲಿಸುವುದಾಗಿ ಪೀಠ ಹೇಳಿತು.

ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಇನ್ನಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ತಿಳಿಸಿತು. ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವುದನ್ನು ವಿರೋಧಿಸುವುದಾಗಿ ರಾಜು ಅವರು ವಾದಿಸಿದರು.

Latest Indian news

Popular Stories