ಬೆಂಗಳೂರು: ಶಾಲೆಗೆ ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿ ವಾಪಸ್ ಮನೆಗೆ ಬಂದು ಸಾವನ್ನಪ್ಪಿರೋ ದಾರುಣ ಘಟನೆ ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. 14 ವರ್ಷದ ಜೆಸ್ಸಿಕಾ ಮೃತ ಬಾಲಕಿ.
ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಜೆಸ್ಸಿಕಾ ಬೆಳಗ್ಗೆ ಶಾಲೆಗೆ ಹೋಗಿ ವಾಪಸ್ ಮನೆಗೆ ಬಂದಿದ್ದಾರೆ. ಬೆಳಗ್ಗೆ 10.30ರ ಸುಮಾರಿಗೆ ಅಪಾರ್ಟ್‌ಮೆಂಟ್‌ಗೆ ಬಂದ ಜೆಸ್ಸಿಕಾ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಜೆಸ್ಸಿಕಾ ತಂದೆ ಸಾಫ್ಟ್‌ವೇರ್ ಎಂಜಿನಿಯರ್, ತಾಯಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಇಂದು ಬೆಳಗ್ಗೆ ಬಾಲಕಿ ಶಾಲೆಗೆ ಹೋಗಿ ವಾಪಸ್ ಬಂದಿರೋದು ಪೋಷಕರಿಗೆ ತಿಳಿದಿಲ್ಲ. ಆಕೆ ಆತ್ಮಹತ್ಯೆ ಮಾಡಿಕೊಂಡ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ.
ಇದೊಂದು ಆತ್ಮಹತ್ಯೆ ಪ್ರಕರಣ, ಆಕೆಯ ನಿರ್ಧಾರಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ, ಜೆಸ್ಸಿಕಾ ಪೋಷಕರು ಆಘಾತಕ್ಕೊಳಗಾಗಿದ್ದಾರೆ, ನಾವು ಅವರನ್ನೂ ಇನ್ನೂ ವಿಚಾರಣೆಗೊಳಪಡಿಸಿಲ್ಲ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಸ್ ಗಿರೀಶ್ ಹೇಳಿದ್ದಾರೆ.
ಖಿನ್ನತೆ ಕಾರಣ?
ಎಂದಿನಂತೆ ಶಾಲೆಗೆ ತೆರಳಿದ್ದ ಜೆಸ್ಸಿಕಾ ಬೇಗ ಮನೆಗೆ ಮರಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. “ಕಳೆದ ಮೂರು ತಿಂಗಳಿಂದ ತರಗತಿಗಳಿಗೆ ಹಾಜರಾಗದೆ ಬೇಗ ಮನೆಗೆ ಮರಳುತ್ತಿದ್ದಳು. ಈ ವಿಷಯವನ್ನು ಆಕೆಯ ಪೋಷಕರ ಗಮನಕ್ಕೆ ತರಲು ಪ್ರಯತ್ನಿಸಿದ್ದೇವೆ, ಆದರೆ ಅವರ ಫೋನ್ ರೀಚ್ ಆಗಿರಲಿಲ್ಲ. ಅಲ್ಲದೆ, ಆಕೆಯ ಶಾಲಾ ಶುಲ್ಕವನ್ನು ಪಾವತಿಸಿಲ್ಲ ಎಂದು ಎಂದು ಶಾಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯ ಪೋಷಕರನ್ನು ವಿಚಾರಣೆ ನಡೆಸಿದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತ ವಾಗಿದೆ.