ಶ್ರೀನಗರ: ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದಲ್ಲಿ ಈ ಮಹತ್ವದ ದಿನವನ್ನು ಆಚರಿಸಿದ್ದಾರೆ.
ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಶ್ರೀನಗರದ ದಾಲ್ ಸರೋವರದ ದಡದಲ್ಲಿರುವ ಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (SKICC) ನಲ್ಲಿ ಇಂದು ಬೆಳಗ್ಗೆ 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (IDY) ಕಾರ್ಯಕ್ರಮವನ್ನು ಮುನ್ನಡೆಸಿದ್ದಾರೆ.
ಜಮ್ಮು-ಕಾಶ್ಮೀರದ ಶ್ರೀನಗರದಿಂದ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯವರೆಗೆ, ಅಂತಾರಾಷ್ಟ್ರೀಯ ಯೋಗ ದಿನವನ್ನು ಗುರುತಿಸಲು ಮೋದಿಯವರ ಶ್ರೀನಗರವನ್ನು ಈ ಬಾರಿ ಆಯ್ಕೆ ಮಾಡಿಕೊಂಡಿದ್ದು, ಪ್ರಧಾನಿಯವರ ಜೊತೆ ವಿವಿಧ ಸ್ತರದ ಸಾವಿರಾರು ಜನರು ಜೊತೆಗೂಡಿದ್ದಾರೆ.
ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ಕಳೆದ 10 ವರ್ಷಗಳಲ್ಲಿ, ಯೋಗದ ವಿಸ್ತರಣೆಯು ಯೋಗಕ್ಕೆ ಸಂಬಂಧಿಸಿದ ಗ್ರಹಿಕೆಯನ್ನು ಬದಲಾಯಿಸಿದೆ. ಇಂದು, ಜಗತ್ತು ಹೊಸ ಯೋಗ ಆರ್ಥಿಕತೆಯನ್ನು ನೋಡುತ್ತಿದೆ. ಭಾರತದಲ್ಲಿ, ಋಷಿಕೇಶ ಮತ್ತು ಕಾಶಿಯಿಂದ ಕೇರಳಕ್ಕೆ, ಯೋಗ ಪ್ರವಾಸೋದ್ಯಮದ ಹೊಸ ಸಂಪರ್ಕ ಪ್ರಪಂಚದಾದ್ಯಂತದ ಪ್ರವಾಸಿಗರು ಭಾರತಕ್ಕೆ ಬರುತ್ತಿದ್ದಾರೆ. ಭಾರತದಲ್ಲಿ ಅಧಿಕೃತ ಪಾರಂಪರಿಕ ಯೋಗವನ್ನು ಕಲಿಯಲು ಬಯಸುತ್ತಾರೆ. ಜನರು ತಮ್ಮ ಫಿಟ್‌ನೆಸ್‌ಗಾಗಿ ವೈಯಕ್ತಿಕ ಯೋಗ ತರಬೇತುದಾರರನ್ನು ಸಹ ಇರಿಸುತ್ತಿದ್ದಾರೆ. ಇವೆಲ್ಲವೂ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು.
ಈ ವರ್ಷ ಭಾರತದಲ್ಲಿ, ಫ್ರಾನ್ಸ್‌ನ 101 ವರ್ಷದ ಮಹಿಳಾ ಯೋಗ ಶಿಕ್ಷಕಿಗೆ ಪದ್ಮಶ್ರೀ ನೀಡಲಾಯಿತು. ಅವರು ಭಾರತಕ್ಕೆ ಬಂದಿರಲಿಲ್ಲ ಆದರೆ ಅವರು ಯೋಗದ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಇಂದು, ಯೋಗದ ಕುರಿತು ಸಂಶೋಧನೆ ನಡೆಸಲಾಗುತ್ತಿದೆ ಪ್ರಪಂಚದಾದ್ಯಂತದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುತ್ತಿವೆ ಎಂದರು.
ಯೋಗದ ಮೂಲಕ ನಾವು ಪಡೆಯುವ ಶಕ್ತಿಯನ್ನು ಶ್ರೀನಗರದಲ್ಲಿ ಇಂದು ಕಾಣಬಹುದು. ಯೋಗ ದಿನದಂದು ದೇಶದ ಜನರಿಗೆ ಮತ್ತು ವಿಶ್ವದ ಮೂಲೆ ಮೂಲೆಗಳಲ್ಲಿ ಯೋಗ ಮಾಡುವ ಜನರಿಗೆ ನಾನು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಅಂತರಾಷ್ಟ್ರೀಯ ಯೋಗ ದಿನವು 10 ವರ್ಷಗಳ ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ. 2014 ರಲ್ಲಿ, ನಾನು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಸ್ತಾಪಿಸಿದೆ, ಭಾರತದ ಈ ಪ್ರಸ್ತಾಪವನ್ನು 177 ರಾಷ್ಟ್ರಗಳು ಬೆಂಬಲಿಸಿದವು. ಅಂದಿನಿಂದ ಯೋಗ ದಿನವು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ ಎಂದರು.