ಬೆಂಗಳೂರು: ಜಾತಿ ಆಧಾರಿತ ಬಹಿಷ್ಕಾರವನ್ನು ಸಮರ್ಥಿಸಿ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಸುವರ್ಣ ನ್ಯೂಸ್ ಟಿವಿಯ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಜನವರಿ 12ರಂದು ದಲಿತ ಸಂಘಟನೆಯೊಂದು ದೂರು ದಾಖಲಿಸಿದೆ.
ಈ ದೂರು ಡಿಸೆಂಬರ್ 27, 2023ರಂದು ಸುವರ್ಣ ನ್ಯೂಸ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ಉಡುಪಿ ಪೇಜಾವರ ಸ್ವಾಮೀಜಿಗಳೊಂದಿಗಿನ “ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಲು ದಲಿತರಿಗೆ ಅವಕಾಶ ನೀಡಲಾಗುತ್ತದೆಯೆ?” ಎಂದು ಶೀರ್ಷಿಕೆ ಹೊಂದಿದ್ದ ‘ನ್ಯೂಸ್ ಅವರ್’ ಟಿವಿ ಕಾರ್ಯಕ್ರಮವನ್ನು ಕೇಂದ್ರೀಕರಿಸಿದೆ. ಈ ಕಾರ್ಯಕ್ರಮದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ದಲಿತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆಯೆ ಎಂಬ ಕುರಿತು ಚರ್ಚೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ವೇಳೆ ದಲಿತ ಸಂಘಟನೆಯ ವಕ್ತಾರ ನಾಗರಾಜ್, ಅಯೋಧ್ಯೆ ರಾಮ ಮಂದಿರದಲ್ಲಿ ಪೂಜೆ ನಡೆಸುವುದರಿಂದ ದಲಿತರನ್ನು ಹೊರಗಿಟ್ಟಿರುವ ಆರೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀ, “ದೇವಸ್ಥಾನದಲ್ಲಿ ಒಬ್ಬರೇ ಪೂಜೆ ಮಾಡುತ್ತಾರೆ, ಎಲ್ಲರೂ ಮಾಡಲಾಗುವುದಿಲ್ಲ. ಕಾಶಿ ದೇವಸ್ಥಾನದಲ್ಲಿ ಹೊರತುಪಡಿಸಿ; ಪೂಜೆಗೆ ನೇಮಕಗೊಂಡವರು ಮಾತ್ರ ಮಾಡುತ್ತಾರೆ. ದೇವಸ್ಥಾನದಲ್ಲಿ ಮಾತ್ರವಲ್ಲ, ಯಾವುದೇ ಕಚೇರಿ ಮತ್ತು ಸಂಸ್ಥೆಯಲ್ಲಿ ಕೂಡ. ಪ್ರತಿಯೊಬ್ಬರೂ ಆ ಹುದ್ದೆಯಲ್ಲಿ ಕುಳಿತುಕೊಳ್ಳಬಹುದು, ಹುದ್ದೆಗೆ ನೇಮಕಗೊಂಡವರಿಗೆ ಮಾತ್ರ ಅವಕಾಶವಿದೆ’ ಎಂದು ಹೇಳುವು ಮೂಲಕ ಬ್ರಾಹ್ಮಣರಿಗೆ ಮಾತ್ರ ಅವಕಾಶ ಎಂದು ಸಮರ್ಥಿಸಿಕೊಂಡಿದ್ದರು. ಜಾತಿ
ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಸಮಯದಲ್ಲೇ ಈ ದೂರು ದಾಖಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಟ್ರಸ್ಟಿಗಳ ಪೈಕಿ ಪೇಜಾವರ ಶ್ರೀ ಕೂಡಾ ಓರ್ವರಾಗಿದ್ದಾರೆ. ಬಹಿಷ್ಕಾರ
ಚರ್ಚೆಯ ಸಂದರ್ಭದಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ನಿರೂಪಕ ಅಜಿತ್ ಹನುಮಕ್ಕನವರ್ ದಲಿತರ ವಿರುದ್ಧ ತಾರತಮ್ಯ ಹಾಗೂ ಅವಹೇಳನಾಕಾರಿ ಮಾತುಗಳನ್ನು ಬಳಸಿದ್ದಾರೆ ಎಂದು ಡಾ. ಬಿ.ಆರ್.ಅಂಬೇಡ್ಕರ್ ದಂಡು ಎಂಬ ಸಂಘಟನೆಯು ದಾಖಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ. “ಧಾರ್ಮಿಕ ಸ್ಥಳಗಳಲ್ಲಿ ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು ಹಾಗೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ದಲಿತರಿಗೆ ಅವಕಾಶವಿಲ್ಲ ಎಂದು ಹೇಳುವ ಮೂಲಕ ಪೇಜಾವರ ಶ‍್ರೀ ಹಾಗೂ ಟಿವಿ ನಿರೂಪಕ ಇಬ್ಬರೂ ಅಸ್ಪೃಶ್ಯತೆಯನ್ನು ಸಮರ್ಥಿಸಿದ್ದಾರೆ” ಎಂದು ದೂರಿನಲ್ಲಿ ಹೇಳಲಾಗಿದೆ.