ಮಡಿಕೇರಿ: ಕಾಂಗ್ರೆಸ್, ಸಮಾಜ ವಾದಿ ಪಕ್ಷಗಳೂ ಸೇರಿದಂತೆ 26 ಪಕ್ಷಗಳ ‘ಇಂಡಿಯಾ’ ಬಿಜೆಪಿ ಮಿತ್ರ ಪಕ್ಷಗಳಿಗೆ ಭಯ ಉಂಟು ಮಾಡಿದ್ದು, ಸೋಲಿನ ಹತಾಶೆಯಿಂದ ವಿದಾಯ ಕೂಟ ನಡೆಸುತ್ತಿವೆ ಎಂದು ಸಮಾಜವಾದಿ ಪಕ್ಷ(ಎಸ್ಪಿ)ದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಮ್ಯೂಸಿಯಮ್ಗೆ ಭೇಟಿ ನೀಡಿ ಮಹಾನ್ ಸೇನಾನಿಯ ಸೇನಾ ಜೀವನದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹವಾಮಾನದಂತೆ ಮೈತ್ರಿಕೂಟದ ಸಭೆಯ ವಾತಾವರಣವೂ ಬಹಳ ಉತ್ತಮವಾಗಿತ್ತು. ಲೋಕಸಭಾ ಚುನಾವಣೆಯನ್ನು ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಎದುರಿಸುತ್ತೇವೆ ಎಂದು ಹೇಳಿದರು.
‘ಇಂಡಿಯಾ’ ಎಂಬ ಹೊಸ ಹೆಸರಿನಿಂದ ಸಹಜವಾಗಿಯೇ ಬಿಜೆಪಿ ಆತಂಕಕ್ಕೊಳಗಾಗಿದೆ. ‘ಇಂಡಿಯಾ’ ಹೆಸರು ತನ್ನದು ಎಂದು ಈವರೆಗೂ ನಮ್ಮನ್ನು ಹೆದರಿಸುತ್ತಿದ್ದ ಬಿಜೆಪಿ ಇದೀಗ ಮೈತ್ರಿ ಪಕ್ಷಗಳು ಯಾವಾಗ ‘ಇಂಡಿಯಾ’ ಎಂದು ಹೆಸರಿಟ್ಟಿತೋ ಆಗಲೇ ಗಲಿಬಿಲಿಗೊಳಗಾಗಿ ದೆ. ಮುಂದಿನ ದಿನಗಳಲ್ಲಿ ‘ಇಂಡಿಯಾ’ವನ್ನು ಪ್ರಬಲಗೊಳಿಸುತ್ತಾ ಭಾರತೀಯರ ಆಶೋತ್ತರಕ್ಕೆ ತಕ್ಕಂತೆ ದೇಶವನ್ನು ಬಿಜೆಪಿ ಹಿಡಿತದಿಂದ ದೂರ ಮಾಡಲಿದ್ದೇವೆ ಎಂದು ಅಖಿಲೇಶ್ ಹೇಳಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಬಡತನ, ಹಾಗೇ ಇದೆ. ದಿನಬಳಕೆಯ ವಸ್ತುಗಳ ದರ ಹೆಚ್ಚುತ್ತಲೇ ಇದೆ. ನೋಟು ಅಮಾನ್ಯೀಕರಣದ ನಂತರವೂ ದೇಶದಲ್ಲಿ ಭ್ರಷ್ಟಾಚಾರ ಕೊನೆಯಾಗಲಿಲ್ಲ ಎಂದರೆ ನೋಟು ಅಮಾನ್ಯೀಕರಣ ನಿರ್ಧಾರವೇ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದ್ದು ಎಂದು ಹೇಳಬೇಕಾಗುತ್ತದೆ. ನೋಟು ಅಮಾನ್ಯೀಕರಣವನ್ನು ಸಮರ್ಥಿಸುವ ಒಂದೇ ಒಂದು ಕಾರಣವನ್ನೂ ಈವರೆಗೂ ಬಿಜೆಪಿಯಿಂದ ನೀಡಲಾಗಲಿಲ್ಲ ಎಂದು ಆರೋಪಿಸಿದರು.