Featured StoryState News

ರಾಜ್ಯ ಸರಕಾರಕ್ಕೆ ತಲೆನೋವಾದ ಆನಂದ್ ಸಿಂಗ್ – ಮುಂದಿನ ನಡೆಯೇನು?

ಹೊಸಪೇಟೆ: ನಾನು ರಾಜ್ಯದ ಉನ್ನತ ರಾಜಕಾರಣಿಯೇನಲ್ಲ, ವಿಜಯನಗರ ಸಾಮ್ರಾಜ್ಯದೊಳಗೆ ಹೊಸಪೇಟೆಯಲ್ಲಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿ ಬಂದಿರುವ ರಾಜಕಾರಣಿಯಷ್ಟೆ, ನನ್ನ ತಪ್ಪಿದ್ದರೆ ತಿದ್ದಿಕೊಳ್ಳುವ ವ್ಯಕ್ತಿ ನಾನು, ಯಾರನ್ನೂ ಬ್ಲ್ಯಾಕ್ ಮೇಲ್ ಮಾಡುವ ಕೆಲಸ ಮಾಡುವ ತಂತ್ರ ನಾನು ಮಾಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಇಂದು ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ನನಗೆ ಕೆಲವೊಂದು ನೋವುಗಳಿವೆ ಹೌದು, ಅದನ್ನು ನಾನು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ಬಗೆಹರಿಸಿಕೊಳ್ಳಲು ಬಯಸುತ್ತೇನೆ, ಇವತ್ತು ನಾನು ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡುವುದಿಲ್ಲ, ಹೇಳಿಕೆ ನೀಡದಂತೆ ನಮ್ಮ ನಾಯಕರು ಸಹ ಸೂಚನೆ ನೀಡಿದ್ದಾರೆ, ನೀವು ಮಾಧ್ಯಮದವರು ಊಹಿಸಿದ ರೀತಿಯಲ್ಲಿ ಇವತ್ತು ನನ್ನಿಂದ ಹೇಳಿಕೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ನನ್ನ ರಾಜಕೀಯ ಜೀವನ ಇದೇ ಹೊಸಪೇಟೆಯ ವೇಣುಗೋಪಾಲ ಸ್ವಾಮಿ ದೇವಸ್ಥಾನ ಬಳಿಯಿಂದ ಆರಂಭವಾಯಿತು. ನಮ್ಮ ನಾಯಕರ ಮೇಲೆ ನನಗೆ ನಂಬಿಕೆಯಿದೆ, ಆದರೆ ನಾಯಕರಿಗೆ ನನ್ನ ಮೇಲೆ ನಂಬಿಕೆಯಿದೆ ಎಂದು ಅನಿಸುತ್ತಿಲ್ಲ, ಬಿ ಎಸ್ ಯಡಿಯೂರಪ್ಪನವರು ಸಿಎಂ ಆಗಿದ್ದರೆ ನಾನು ಏನೂ ಕೇಳುತ್ತಿರಲಿಲ್ಲ ಎಂದರು.

ನಾನು ಇದೇ ವೇಣುಗೋಪಾಲ ಸನ್ನಿಧಿ ಬಳಿ ರಾಜಕೀಯ ಜೀವನ ಆರಂಭಿಸಿದ್ದು, ಇಲ್ಲಿಯೇ ಅಂತ್ಯವಾಗಲೂ ಬಹುದು, ಗೊತ್ತಿಲ್ಲ, ಮುಂದೆ ಏನಾಗಬಹುದು ಎಂದು, ರಾಜಕೀಯ ಜೀವನ ಪುನರಾರಂಭವಾಗಲೂಬಹುದು, ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ನಾಳೆ ಅಥವಾ ನಾಡಿದ್ದು ಭೇಟಿ ಮಾಡುತ್ತೇನೆ ಎಂದರು.

ಇಂದು ಹೊಸಪೇಟೆಯಲ್ಲಿ ವೇಣುಗೋಪಾಲ ಸ್ವಾಮಿಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಕುಟುಂಬಸ್ಥರೊಂದಿಗೆ ಭಾಗವಹಿಸಿ ಹೋಮ-ಹವನ ಮಾಡಿ ಮುಗಿಸಿದ ನಂತರ ಹೊರಗೆ ಬಂದು ಮಾಧ್ಯಮಗಳ ಜೊತೆ ಸಚಿವ ಆನಂದ್ ಸಿಂಗ್ ಸವಿವರವಾಗಿ ಮಾತನಾಡಿದರು.

ನಾನು ದೇವರ ಸನ್ನಿಧಿಯ ಮುಂದೆ ಕುಳಿತು ಪೂಜೆಯಲ್ಲಿ ಭಾಗಿಯಾಗಿದ್ದ ವೇಳೆ ಸತತ ಫೋನ್ ಕರೆಗಳು ಬರುತ್ತಿದ್ದವು. ದೇವರ ಮುಂದೆ ಶ್ರದ್ಧೆಯಿಂದ ಕುಳಿತು ಸಂಕಲ್ಪ ಮಾಡಿಕೊಂಡು ಇರುವಾಗ ಪೂಜೆಯಲ್ಲಿ ಭಾಗಿಯಾಗಿದ್ದಾಗ ಫೋನ್ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ, ಅದಕ್ಕೆ ಕ್ಷಮೆಯಿರಲಿ ಎಂದು ಕೇಳಿಕೊಂಡರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button