ಮಂಗಳೂರು: ಪೊಲೀಸ್ ಠಾಣೆಯಲ್ಲೇ ಪೊಲೀಸರಿಗೆ ನಿಂದನಾತ್ಮಕ ಪದ ಬಳಸಿ ಪ್ರಕರಣ ದಾಖಲಾಗಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಠಾಣಾ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿದ್ದಲ್ಲದೇ, ಡಿಜೆ ಹಳ್ಳಿ ಕೆಜಿ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಮಾದರಿಯಲ್ಲೇ ಬೆಳ್ತಂಗಡಿ ಠಾಣೆಗೂ ಮಾಡಲಾಗುವುದು ಎಂದು ಜೀವ ಬೆದರಿಕೆ ಒಡ್ಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮರಳುಗಾರಿಗೆ ಸಂಬಂಧ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಬಿಜೆಪಿ ಮುಖಂಡನ ಪರ ಯಾವುದೇ ಅನುಮತಿ ಇಲ್ಲದೇ ಬೆಳ್ತಂಗಡಿ ಯಲ್ಲಿ ಹರೀಶ್ ಪೂಂಜಾ ತನ್ನ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯಲ್ಲಿ ‘ಪೊಲೀಸರ ಕಾಲರ್ ಪಟ್ಟಿ ಹಿಡಿಯುತ್ತೇನೆ’. ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಯಂತೆ ಬೆಳ್ತಂಗಡಿ ಠಾಣೆಗೂ ಗತಿ ಕಾಣಿಸುತ್ತೇನೆಂದು ಪೊಲೀಸರ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದರು.
ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ವಿವಿಧ ಸೆಕ್ಷನ್ ಗಳ ಅಡಿ ಹರೀಶ್ ಪೂಂಜಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.