ಅನಂತಪುರ: ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕುಂದೇರು ಮಂಡಲದಲ್ಲಿ ಭಾನುವಾರ ನಡೆದಿದೆ. ಕಾರು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಇನ್ನಿಬ್ಬರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ ನಾಲ್ಕಕ್ಕೇರಿದೆ. ಇತರರಿಗೆ ತೀವ್ರ ಗಾಯಗಳಾಗಿವೆ.
ಅಪಘಾತ ಮಾಹಿತಿ ಪಡೆದ ತಕ್ಷಣ ಸರ್ಕಲ್ ಇನ್ಸ್‌ಪೆಕ್ಟರ್ ರಾಜು ಮತ್ತು ಪೊಲೀಸ್ ತಂಡ ಅಪಘಾತ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಅನಂತಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.