ಬ್ಯಾಡಗಿ ಎಪಿಎಂಸಿ ಹಿಂಸಾಚಾರ: 4 ಎಫ್‌ಐಆರ್ ದಾಖಲು, 81 ಮಂದಿ ಬಂಧನ

ಹಾವೇರಿ: ಬ್ಯಾಡಗಿ ಎಪಿಎಂಸಿಯಲ್ಲಿ ರೈತರ ಪ್ರತಿಭಟನೆ ವೇಳೆ ಕಳ್ಳರು ಲಾಭ ಮಾಡಿಕೊಂಡಿದ್ದು, ಕೆಲ ಅಂಗಡಿಗಳಿಗೆ ನುಗ್ಗಿ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ದೋಚಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು 4 ಎಫ್ಐಆರ್ ದಾಖಲು ಮಾಡಿಕೊಂಡಿದ್ದು, 81 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಬ್ಯಾಡಗಿ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತದಿಂದ ಹಾವೇರಿ ರೈತರು ರೊಚ್ಚಿಗೆದ್ದಿದ್ದರು. ಬ್ಯಾಡಗಿ ಪಟ್ಟಣದಲ್ಲಿ ಎಪಿಎಂಸಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ದಾಂಧಲೆ ಮಾಡಿದ್ದು, ಈ ವೇಳೆ ಉದ್ರಿಕ್ತಗೊಂಡ ರೈತರು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಇಟ್ಟಿದ್ದರು.

ಘಟನೆಯಲ್ಲಿ ಅಗ್ನಿಶಾಮಕ ದಳದ ವಾಹನ, ಮೂರು ದ್ವಿಚಕ್ರ ವಾಹನ, ಸರ್ಕಾರಿ ವಾಹನಗಳು ಸೇರಿದಂತೆ ಒಟ್ಟು ಎಂಟು ವಾಹನಗಳು ಸುಟ್ಟು ಕರಕಲಾಗಿವೆ. ಪ್ರತಿಭಟನಾಕಾರರು ಎರಡು ಅಂಗಡಿಗಳನ್ನು ಲೂಟಿ ಮಾಡಿದ್ದು, 15 ಲಕ್ಷ ರೂಗಳನ್ನು ದೋಚಿದ್ದಾರೆ. ಈ ಸಂಬಂಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬ್ಯಾಡಗಿಯಲ್ಲಿ ಗಲಾಟೆ ನಡೆಸಿದ ರೈತರ ವಿರುದ್ಧ ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ವಾಹನಗಳಿಗೆ ಹಚ್ಚಿದ ಹಿನ್ನೆಲೆಯಲ್ಲಿ ಪೊಲೀಸರು, ಅಗ್ನಿಶಾಮಕ, ಎಪಿಎಂಸಿ ಮತ್ತು ಪತ್ರಕರ್ತರ ಸಂಘವು ಎಫ್‌ಐಆರ್ ದಾಖಲಿಸಿದೆ.

ಇನ್ನು ಘಟನೆ ಹಿನ್ನೆಲೆಯಲ್ಲಿ ಬ್ಯಾಡಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆಎಸ್‌ಆರ್‌ಪಿ ಮತ್ತು ಡಿಎಆರ್‌ ಏಳು ಬೆಟಾಲಿಯನ್‌ ಪಡೆಗಳೊಂದಿಗೆ 700 ಪೊಲೀಸರು ಈಗ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಇದಲ್ಲದೆ, ನೆರೆ ಜಿಲ್ಲೆಗಳಿಂದಲೂ 20 ಹೆಚ್ಚುವರಿ ಪೊಲೀಸ್ ಪಡೆಗಳನ್ನು ರಕ್ಷಣೆಗಾಗಿ ಕರೆಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ತನಿಖೆ ಕೈಗೊಂಡಿರುವ ಪೊಲೀಸರು ಗಲಭೆಕೋರರು ಮತ್ತು ಕಲ್ಲು ತೂರಾಟ, ದರೋಡೆಯಲ್ಲಿ ತೊಡಗಿದ್ದವರ ಕುರಿತು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಘಟನೆ ಸಂಬಂಧ ಇದೂವರೆಗೆ ಹಾವೇರಿ, ಬಳ್ಳಾರಿ, ರಾಯಚೂರು, ಆಂಧ್ರಪ್ರದೇಶದ 81 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಂಧಿತರ ಸಂಖ್ಯೆ 500 ದಾಟಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಧಿತರಿಗಾಗಿ ಸರ್ಕಾರಿ ಹಾಸ್ಟೆಲ್ ಅನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸಲಾಗಿದ್ದು, ಸ್ಥಳ ಲಭ್ಯತೆಯ ಆಧಾರದ ಮೇಲೆ ಬಂಧಿತರನ್ನು ಬಳ್ಳಾರಿ, ಬೆಳಗಾವಿ ಮತ್ತು ಬೆಂಗಳೂರು ಜೈಲುಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಜಿಲ್ಲಾ ಸಚಿವ ಶಿವಾನಂದ ಪಾಟೀಲ್ ಅವರು ಇಂದು ಹಾವೇರಿಗೆ ಭೇಟಿ ನೀಡಲಿದ್ದು, ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯನ್ನು ಭೇಟಿ ಮಾಡಲಿದ್ದಾರೆ.

ಇದೇ ವೇಳೆ ಬ್ಯಾಡಗಿಯ ಎಪಿಎಂಸಿ ಮಾರುಕಟ್ಟೆಗೂ ಸಚಿವರು ಭೇಟಿ ನೀಡಿ ವರ್ತಕರ ಸಂಘದ ಸದಸ್ಯರೊಂದಿಗೆ ಮಾತುಗತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

ನಿನ್ನೆಯಷ್ಟೇ ಹಾವೇರಿ ಡಿಸಿ ರಘುನಂದನ ಮೂರ್ತಿ ಹಾಗೂ ಎಸ್ಪಿ ಅಂಶುಕುಮಾರ್ ಎಪಿಎಂಸಿ ಸದಸ್ಯರು ಹಾಗೂ ವರ್ತಕರೊಂದಿಗೆ ಸಭೆ ನಡೆಸಿ, ಮಾತುಕತೆ ನಡೆಸಿದ್ದರು.

Latest Indian news

Popular Stories