ಬಿಸಿಲ ಬೇಗೆಗೆ ಎಳ ನೀರ ಭರ್ಜರಿ ವ್ಯಾಪಾರ: 50-60 ಕ್ಕೇರಿದ ಬೆಲೆ

ಎಳನೀರಿನ ದರ ನೋಡ ನೋಡುತ್ತಿದ್ದಂತೆಯೇ 50- 60 ರೂ. ತಲುಪಿದೆ. ಆದರೂ ಲಭ್ಯ ಇಲ್ಲ. ಒಂದೊಮ್ಮೆ ಬೆಳಗ್ಗೆ ಸ್ವಲ್ಪ ಪ್ರಮಾಣದಲ್ಲಿ ಎಲ್ಲಿಂದಾದರೂ ಮಾರುಕಟ್ಟೆಗೆ ಬಂದರೂ ಬಲುಬೇಗನೆ ಮುಗಿದು ಹೋಗುತ್ತದೆ. ಬೆಳಗ್ಗೆ 11 ಗಂಟೆ ವೇಳೆಗೆ ಎಳನೀರು ಇಲ್ಲ ಎನ್ನುವ ಉತ್ತರ ವ್ಯಾಪಾರಿಗಳಿಂದ ದೊರೆಯುತ್ತದೆ.

ಈ ಬಾರಿಯ ಸೀಸನ್‌ನಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಎಳನೀರಿನ ಬೆಲೆ ಗಗನಕ್ಕೆ ತಲುಪಿದೆ. ಒಂದು ಸೀಯಾಳ ಬೆಲೆ 25ರಿಂದ 30 ಇದ್ದುದು ಏರಿಕೆಯಾಗುತ್ತಾ ಸಾಗಿ 40, 50 ಆಗಿ ಈಗ 60 ರೂ.ಗೆ ತಲುಪಿದೆ. ಕುಂದಾಪುರ, ಉಡುಪಿಯಲ್ಲಿ 60 ರೂ. ಇದ್ದರೆ, ಮಂಗಳೂರಿನಲ್ಲಿ 50ರಿಂದ 55 ರೂ. ಇದೆ.

ಮಂಗಳೂರಿಗೆ ಹಿಂದೆ ತಮಿಳುನಾಡಿನಿಂದ ಸಾಕಷ್ಟು ಕೆಂದಾಳೆ ಸೀಯಾಳ ಬರುತಿತ್ತು. ಆದರೆ ಇತ್ತೀಚೆಗೆ ಅದೂ ಬರುತ್ತಿಲ್ಲ. ಊರಿನ ಸೀಯಾಳ ಕೂಡ ಈ ಬಾರಿ ತೀರಾ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಬೆಳೆಯೇ ಇಲ್ಲ ಎಂದು ರೈತರು ಹೇಳುತ್ತಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಕರಾವಳಿಯಾದ್ಯಂತ 35 ರೂ.ಗೆ ಧಾರಾಳ ಎಳನೀರು ಸಿಗುತ್ತಿತ್ತು. ಎಳನೀರಿನ ಅಲಭ್ಯತೆಯಿಂದಾಗಿ ಕೆಲವೆಡೆ ಅಂಗಡಿಗಳನ್ನೇ ಮುಚ್ಚಿದ್ದಾರೆ.

ಕಡೂರು, ಬೀರೂರು, ಹಾಸನ ಕಡೆಯಿಂದ ಪಿಕ್‌ಅಪ್‌ ವಾಹನದಲ್ಲಿ ಎಳನೀರು ತಂದು ಉಡುಪಿ ಜಿಲ್ಲೆಯ ಅಂಗಡಿಗಳಿಗೆ ಪೂರೈಸಲಾಗುತ್ತಿತ್ತು. ಅಲ್ಲಿ ರೈತರಿಗೆ ಕೇವಲ 30ರಿಂದ 35 ರೂ. ನೀಡಲಾಗುತ್ತಿದೆ. ಆದರೆ ಈಗ ಅಲ್ಲೂ ದೊರೆಯುತ್ತಿಲ್ಲ. ಮಾರುವರು ಕನಿಷ್ಠ 20 ರೂ. ವರೆಗೆ ಲಾಭ ಇಡುತ್ತಿದ್ದಾರೆ ಎಂಬ ದೂರುಗಳೂ ಕೇಳಿಬಂದಿವೆ. ಎಳನೀರಿನ ಬದಲು ಕಬ್ಬಿನಹಾಲು ಮೊದಲಾದ ಪರ್ಯಾಯ ಪಾನೀಯದ ಮೊರೆ ಹೋಗಬೇಕಾದ ಅನಿವಾರ್ಯ ಉಂಟಾಗಿದೆ.

Latest Indian news

Popular Stories