ರಾಜ್ಯ ಸರಕಾರದ ವಿರುದ್ಧ ಆಗಸ್ಟ್ 28ಕ್ಕೆ ಬಿಜೆಪಿ ಬೃಹತ್‌ ಪ್ರತಿಭಟನೆ

ಬೆಂಗಳೂರು: ಆಡಳಿತ ವೈಫ‌ಲ್ಯ, ಎಸ್‌ಸಿಪಿ-ಟಿಎಸ್‌ಪಿ ಹಣದ ದುರ್ಬಳಕೆ, ಕಾವೇರಿ ಜಲ ವಿವಾದ ಸಹಿತ ರಾಜ್ಯ ಸರಕಾರದ ವಿರುದ್ಧ ಆ. 28ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ವಿಪಕ್ಷ ನಾಯಕ ಹಾಗೂ ಹೊಸ ರಾಜ್ಯಾಧ್ಯಕ್ಷರ ನೇಮಕ ವಿಚಾರವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವಂತೆ ಕೇಂದ್ರ ನಾಯಕರ ಮೇಲೆ ಒತ್ತಡ ಹೇರುವ ಬಗ್ಗೆಯೂ ಚರ್ಚೆಯಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಿಎಂಗಳಾದ ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಕೆ.ಎಸ್‌. ಈಶ್ವರಪ್ಪ, ಆರ್‌. ಅಶೋಕ್‌, ಡಾ| ಅಶ್ವತ್ಥನಾರಾಯಣ, ರಾಜ್ಯ ಸಂಘಟನ ಕಾರ್ಯದರ್ಶಿ ಜಿ.ವಿ. ರಾಜೇಶ್‌, ಮಾಜಿ ಶಾಸಕ ಸಿ.ಟಿ. ರವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು.

ಇದರ ಜತೆಗೆ ಸೆ. 8ರವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಸೂಚನೆ ಹಿನ್ನೆಲೆಯಲ್ಲೇ ಕೋರ್‌ ಕಮಿಟಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾತನಾಡಿದ ಬಿಎಸ್‌ವೈ, ವಿಪಕ್ಷ ನಾಯಕರ ಆಯ್ಕೆ ಯಾವಾಗಲಾದರೂ ಆಗಲಿ. ಆ ವಿಚಾರದಲ್ಲಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಪ್ರಬಲ ವಿಪಕ್ಷವಾಗಿ ಏನು ಕೆಲಸ ಮಾಡಬೇಕೋ ಅದನ್ನು ಮಾಡೋಣ. ಸರಕಾರದ ವಿರುದ್ಧ ಸಮರ ಸಾರಲು ಸಾಕಷ್ಟು ವಿಚಾರಗಳಿವೆ. ಇಲ್ಲಿ ಸಂಖ್ಯಾಬಲವೇ ಮುಖ್ಯವಲ್ಲ. ಎಲ್ಲ ವಿಚಾರಗಳನ್ನು ಜನರ ಬಳಿ ಕೊಂಡೊಯ್ಯೋಣ ಎಂದು ಸಲಹೆ ನೀಡಿದರು ಎನ್ನಲಾಗಿದೆ. ಹೀಗಾಗಿ ನಿರಂತರ ಪ್ರತಿಭಟನೆ ಆಯೋಜಿಸುವ ಮೂಲಕ ಕಾರ್ಯಕರ್ತರ ಪಡೆಯನ್ನು ಕ್ರಿಯಾಶೀಲಗೊಳಿಸಲು ಸಭೆ ತೀರ್ಮಾನಿಸಲಾಗಿದೆ. ಯಾವ ವಿಚಾರವನ್ನೂ ಕಡೆಗಣಿಸದೆ ಗಟ್ಟಿ ಸಂದೇಶ ರವಾನೆಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಗಮನಹರಿಸಿ
ಈ ಸಭೆಯಲ್ಲಿ ಲೋಕಸಭಾ ಚುನಾವಣೆ ತಯಾರಿ ಬಗ್ಗೆ ಪ್ರಸ್ತಾವವಾಗಿದೆ. ಟಿಕೆಟ್‌ ಆಯ್ಕೆ ಪ್ರಕ್ರಿಯೆಯನ್ನು ವರಿಷ್ಠರು ನೋಡಿಕೊಳ್ಳುತ್ತಾರಾದರೂ ರಾಜ್ಯ ಘಟಕದಿಂದ ತಯಾರಿ ನಡೆಸಲೇಬೇಕು. ಮಾದರಿ ಮತದಾರರ ಪಟ್ಟಿ ತಯಾರಿ ನಡೆದಿದೆ. ಹೀಗಾಗಿ ಬೂತ್‌ ಮಟ್ಟದಲ್ಲಿ ಮತ್ತೆ ನಮ್ಮ ಕಾರ್ಯಕರ್ತರನ್ನು ಸಿದ್ಧಗೊಳಿಸಬೇಕಿದೆ. ಪ್ರತಿಯೊಬ್ಬರೂ ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಮನ ಹರಿಸುವಂತೆ ಹಿರಿಯರಿಗೆ ಸೂಚನೆ ನೀಡಲಾಗಿದೆ.

ವರಿಷ್ಠರಿಗೆ ಮನವಿ ಮಾಡಲು ನಿರ್ಧಾರ
ಉಭಯ ಸದನದ ವಿಪಕ್ಷ ನಾಯಕನ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಹುದ್ದೆಗೆ ಆದಷ್ಟು ಬೇಗ ನೇಮಕ ಮಾಡುವಂತೆ ರಾಷ್ಟ್ರೀಯ ವರಿಷ್ಠರ ಗಮನ ಸೆಳೆಯಲು ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯಲ್ಲಿ ಎಲ್ಲರೂ ಈ ವಿಚಾರವನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿಯವರಿಗೆ ತಿಳಿಸಿದರು. ವಿಪಕ್ಷ ನಾಯಕನ ನೇಮಕವಾಗದೆ ರಾಜ್ಯ ನಾಯಕರು ತೀವ್ರ ಮುಜುಗರ ಅನುಭವಿಸುತ್ತಿದ್ದಾರೆ. ಹೀಗಾಗಿ ತತ್‌ಕ್ಷಣ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ವರಿಷ್ಠರ ಗಮನ ಸೆಳೆಯಿರಿ. ಅಗತ್ಯ ಬಿದ್ದರೆ ರಾಜ್ಯ ಕೋರ್‌ ಕಮಿಟಿಯ ಒಂದು ನಿಯೋಗ ದಿಲ್ಲಿಗೆ ತೆರಳಿ ವರಿಷ್ಠರ ಭೇಟಿ ಮಾಡಲಿ ಎಂಬ ಸಂದೇಶವನ್ನು ರವಾನಿಸಲಾಗಿದೆ.

Latest Indian news

Popular Stories