ಕಾಂಗ್ರೆಸ್ ಮುಖಂಡ ಶಿವರಾಜ್ ತಂಗಡಗಿ ತಾಕತ್ತಿದ್ದರೆ ಮೋದಿ ಬೆಂಬಲಿಗರನ್ನು ಮುಟ್ಟಿ ನೋಡಲಿ: ಬಿಜೆಪಿ ವಕ್ತಾರ ಮುಟ್ಲುಪಾಡಿ ಸವಾಲು

ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಿಂದ ಕoಗೆಟ್ಟಿರುವ ಕಾಂಗ್ರೆಸ್ಸಿನ ದುಸ್ಥಿತಿ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತಾಗಿದೆ. ಅಂದು ಸೋನಿಯಾ ಗಾಂಧಿ ಮೋದಿಯವರನ್ನು ಸಾವಿನ ವ್ಯಾಪಾರಿ ಎಂದಿದ್ದರು, ಖರ್ಗೆ ಮೋದಿಯವರನ್ನು ವಿಷ ಸರ್ಪ ಎಂದಿದ್ದರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೂ ಏಕವಚನದಲ್ಲೇ ಮಾತನಾಡುತ್ತಾರೆ, ಅದರ ಮುಂದುವರೆದ ಬಾಗವಾಗಿ ಈಗ ಸಚಿವ ಶಿವರಾಜ್‌ ತಂಗಡಗಿ ಮೋದಿ ಮೋದಿ ಎನ್ನುವ ಮೋದಿ ಬೆಂಬಲಿಸುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿರುವುದು ಖಂಡನೀಯ. ಕಪಾಳಕ್ಕೆ ಹೊಡೆಯುವುದು ದೂರದ ಮಾತು. ಶಿವರಾಜ್ ತಂಗಡಗಿಗೆ ತಾಕತ್ತಿದ್ದರೆ ಮೋದಿ ಮೋದಿ ಎನ್ನುವ ಕೋಟ್ಯಾಂತರ ಮೋದಿ ಅಭಿಮಾನಿಗಳನ್ನು ಮುಟ್ಟಿ ನೋಡಲಿ ಎಂದು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪಾಡಿ ಸವಾಲು ಹಾಕಿದ್ದಾರೆ.

ಅವರು ಕಾಂಗ್ರೆಸ್ ಸಚಿವ ಶಿವರಾಜ್ ತಂಗದಡಿ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಚುನಾವಣಾ ಸೋಲಿನ ವಾಸನೆ ಬರುತ್ತಿದ್ದಂತೆ ಕಾಂಗ್ರೆಸ್‌ ಮೋದಿಯವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದೆ. ದೇಶದಲ್ಲಿ ಪಾತಾಳಕ್ಕೆ ಕುಸಿದಿರುವ ಕಾಂಗ್ರೆಸ್‌, ರಾಜ್ಯದಲ್ಲೂ ಪಾತಾಳಕ್ಕಿಳಿಯುವ ಭೀತಿಯಿಂದ ಈ ರೀತಿಯ ಹೊಲಸು ಹೇಳಿಕೆಗಳನ್ನು ನೀಡುತ್ತಿದೆ ಎಂದರು.

ದೇಶದ ಯುವ ಜನತೆ ಮೋದಿ ಆಡಳಿತವನ್ನು ಮೆಚ್ಚಿ ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಿಯನ್ನಾಗಿಸಲು ತೋರುತ್ತಿರುವ ಉತ್ಸಾಹವನ್ನು ಕಾಂಗ್ರೆಸ್ಸಿಗೆ ನೋಡಲಾಗುತ್ತಿಲ್ಲ.

ಮೋದಿಯವರ ಆಡಳಿತಾವಧಿಯಲ್ಲಿ ನಿರುದ್ಯೋಗದ ಪ್ರಮಾಣ ಶೇ.4.7%ರಷ್ಟು ಇಳಿದಿದೆ. ಆರ್ಥಿಕತೆಯಲ್ಲಿ ಭಾರತ 5ನೇ ಸ್ಥಾನಕ್ಕೇರಿರುವ ಪರಿಣಾಮ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರಕಿವೆ. ಅದಕ್ಕಾಗಿ ಯುವಜನತೆ ‘ಮೋದಿ ಮೋದಿ’ ಎನ್ನುತ್ತಾರೆ. ಇದನ್ನು ಸಹಿಸದ ಕಾಂಗ್ರೆಸ್‌ ತೀರ ಕೆಳಮಟ್ಟಕ್ಕೆ ಇಳಿದು ತನ್ನ ನಾಲಿಗೆಯನ್ನು ಹರಿಬಿಟ್ಟಿರುವುದು ಅತ್ಯಂತ ಖಂಡನೀಯ ಎಂದರು.

ನರೇಂದ್ರ ಮೋದಿಯವರ ಆಡಳಿತದಲ್ಲಿ ಯುವಕರು ದೇಶದೊಳಗೆ ನೂರಾರು ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಅಪ್‌ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಅದಕ್ಕಾಗಿಯೇ ಮೋದಿಗೆ ಮತ ನೀಡುತ್ತಾ ಬಂದಿದ್ದಾರೆ. ಆದರೆ ಕಾಂಗ್ರೆಸ್ಸಿನ 53 ವರ್ಷದ ನಕಲಿ ಗಾಂಧಿ ಕುಟುಂಬದ ಯುವರಾಜನಿಂದ ಬರೇ ಓಡಾಟ ವಿನಃ ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ.

2022-23ರಲ್ಲಿ 5.20 ಲಕ್ಷ ಯುವಕರು ಪದವಿ ಪಡೆದಿದ್ದಾರೆ, ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಯುವ ನಿಧಿ ಯೋಜನೆಯಡಿ ಕೇವಲ 3,500 ಯುವಕರಿಗೆ ಮಾತ್ರ ಭತ್ತೆ ನೀಡಿದೆ. ಯುವಕರಿಗೆ ಸುಳ್ಳು ಹೇಳಿ ಮೋಸ ಮಾಡಿದ ಕಾಂಗ್ರೆಸ್‌ ರಾಜ್ಯದ ಯುವ ಜನತೆಯ ಕ್ಷಮೆ ಕೇಳಬೇಕು ಎಂದರು.

ಸುಮಾರು 1.84 ಕೋಟಿ ಮೊದಲ ಬಾರಿಗೆ ಮತ ಚಲಾಯಿಸುವವರು ಮೋದಿಯವರ ಜೊತೆಗಿದ್ದಾರೆ. 20-29 ವರ್ಷ ವಯಸ್ಸಿನ ಯುವಕರು 19.74 ಕೋಟಿ ಮತದಾರರು ಮೋದಿಯವರ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ, ಅದಕ್ಕಾಗಿಯೇ ಕಾಂಗ್ರೆಸ್ ಹೆದರುತ್ತಿದೆ.

ಮೋದಿ ಪರ ಘೋಷಣೆ ಕೂಗಿದವರಿಗೆ ಕಪಾಳ ಮೋಕ್ಷ ಮಾಡುವ ಸಚಿವರ ಕರೆ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಆದರ್ಶಗಳಿಗೆ ವಿರುದ್ಧವಾಗಿದೆ. ಇದು ಕಾಂಗ್ರೆಸ್ ಪಕ್ಷದ ನೀತಿಯಲ್ಲಿ ಆತಂಕಕಾರಿ ಬದಲಾವಣೆಯನ್ನು ಸೂಚಿಸುತ್ತದೆ. ಹಿಂಸಾಚಾರದ ಈ ಅನುಮೋದನೆಯು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸವಾಲು ಹಾಕುತ್ತದೆ ಎಂದರು.

ಮಾರ್ಚ್ 25 ರಂದು ಕಾಂಗ್ರೆಸ್ಸಿನ ಮುಖ್ಯ ವಕ್ತಾರೆ ಸುಪ್ರಿಯಾ ಶ್ರಿನಾಟೆ ಇನ್ಸ್ಟಾಗ್ರಾಮ್ ನಲ್ಲಿ ಕಂಗನಾ ರಣಾವತ್‌ ಅವರ ಚಿತ್ರದೊಂದಿಗೆ ‘ಮಂಡಿಯಲ್ಲಿ ಪ್ರಸ್ತುತ ದರ ಎಷ್ಟು?’ ಎಂದು ಪೋಸ್ಟ್ ಮಾಡಿದ್ದರು. ಕಾಂಗ್ರೆಸ್ ಹೆಣ್ಣು ಮಕ್ಕಳ ಬಗ್ಗೆ ಬಳಸುವ ಕೀಳು ಮಟ್ಟದ ಬಾಷೆಯನ್ನು ಈ ಪೋಸ್ಟ್ ತೋರಿಸುತ್ತದೆ.

ಮಹಿಳಾ ಸಬಲೀಕರಣದ ಬಗ್ಗೆ ಉದ್ದುದ್ದ ಬಾಷಣ ಮಾಡುವ ರಾಹುಲ್‌ ಗಾಂಧಿ, ತನ್ನ ಪಕ್ಷದ ವಕ್ತಾರೆಯ ಮಾತನ್ನು ಖಂಡಿಸಿಲ್ಲ. ಕಾಂಗ್ರೆಸ್‌ ಪಕ್ಷ ರಾಜೀವ್‌ ಗಾಂಧಿ ಕಾಲದಿಂದಲೂ ಮಹಿಳಾ ವಿರೋಧಿ ಧೋರಣೆಯನ್ನು ಅನುಸರಿಸಿಕೊಂಡು ಬಂದಿದೆ. ಅಂದು ಶಾ ಬಾನು ಪ್ರಕರಣದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಜೀವನಕ್ಕೆ ಕೊಳ್ಳಿ ಇಟ್ಟಿತ್ತು ಎಂದರು.

ಸಂಸ್ಕೃತಿಯ ಗಂಧ ಗಾಳಿಯ ಅರಿವಿಲ್ಲದ ಶಿವರಾಜ್ ತಂಗದಡಿಗೆ ಕಾoಗ್ರೆಸ್ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೊಣೆ ನೀಡಿರುವುದು ನಾಚಿಕೆಗೇಡು. ತಂಗಡಗಿ ಹೇಳಿಕೆಯಿಂದ ಕಾಂಗ್ರೆಸ್ ತನ್ನ ಗೂoಡಾಗಿರಿ ಸಂಸ್ಕೃತಿಯ ಪರಮಾವಧಿಯನ್ನು ದಾಟಿರುವುದು ಸಾಬೀತಾಗಿದೆ. ಕಾಂಗ್ರೆಸ್ಸಿನ ಈ ಎಲ್ಲಾ ಎಡಬಿಡಂಗಿತನದ ಹೀನ ವರ್ತನೆಗೆ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸತೀಶ್ ಶೆಟ್ಟಿ ಮುಟ್ಲುಪಾಡಿ ತಿಳಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಮಾತನಾಡಿ, ಜಿಲ್ಲೆಯಾದ್ಯಂತ ಬಿಜೆಪಿ ಗೆಲುವಿಗೆ ಪೂರಕ ವಾತಾವರಣವಿದ್ದು ಚುನಾವಣಾ ಅಭ್ಯರ್ಥಿಯ ಜೊತೆಗೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಬಿರುಸಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಪರ ಯೋಜನೆಗಳು, ಚುನಾವಣಾ ಅಭ್ಯರ್ಥಿಯ ವರ್ಚಸ್ಸು ಮತ್ತು ಸಚ್ಚಾರಿತ್ರ್ಯ ವ್ಯಕ್ತಿತ್ವ ಬಿಜೆಪಿ ಪಾಲಿಗೆ ವಾರದಾನವಾಗಲಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ದೊಡ್ಡ ಅಂತರದ ಗೆಲುವು ನಿಶ್ಚಿತ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಪೂರಕವಾಗಿ ಬಿಜೆಪಿ ಉಡುಪಿ ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಮಾವೇಶಗಳನ್ನು ಹಮ್ಮಿಕೊಂಡಿದೆ. ಕುಂದಾಪುರ ಸಮಾವೇಶವು ಮಾ.29, ಸಂಜೆ ಗಂಟೆ 4.00ಕ್ಕೆ ಕೋಟೆಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ, ಕಾಪು ಸಮಾವೇಶವು ಮಾ.30, ಸಂಜೆ ಗಂಟೆ 4.00ಕ್ಕೆ ಕಾಪು ಹೋಟೆಲ್ ಕೆ1 ಸಭಾಂಗಣದಲ್ಲಿ, ಉಡುಪಿ ಸಮಾವೇಶವು ಏ.3, ಬೆಳಿಗ್ಗೆ ಗಂಟೆ 10.30ಕ್ಕೆ ಕಡಿಯಾಳಿಯ ಬಿಜೆಪಿ ಜಿಲ್ಲಾ ಕಚೇರಿಯ ಬಳಿ, ಕಾರ್ಕಳ ಸಮಾವೇಶವು ಏ.5, ಬೆಳಿಗ್ಗೆ ಗಂಟೆ 10.30ಕ್ಕೆ ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಮಹಿಳಾ ಸಮಾವೇಶ, ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ಯುವ ಮೋರ್ಚಾ ನೇತೃತ್ವದಲ್ಲಿ ಯುವ ಕಾರ್ಯಕರ್ತರ ಸಮಾವೇಶಗಳೂ ನಡೆಯಲಿವೆ ಎಂದು ಕೆ.ರಾಘವೇಂದ್ರ ಕಿಣಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ವಕ್ತಾರ ವಿಜಯಕುಮಾರ್ ಉದ್ಯಾವರ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.

Latest Indian news

Popular Stories