ಮಾಜಿ ಪ್ರೇಯಸಿಯ ಖಾಸಗಿ ವಿಡಿಯೋ-ಫೋಟೋ ಲೀಕ್ ಮಾಡುವ ಬೆದರಿಕೆ: ‘ಬೃಂದಾವನ’ ನಟ ವರುಣ್ ಆರಾಧ್ಯ ವಿರುದ್ಧ ಪ್ರಕರಣ

ಬೆಂಗಳೂರು: ರೀಲ್ಸ್ ಮೂಲಕ ಖ್ಯಾತನಾಗಿ ನಂತರ ಬೃಂದಾವನ ಧಾರಾವಾಹಿಯಲ್ಲಿ ನಟಿಸಿದ್ದ ವರುಣ್ ಆರಾಧ್ಯ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಾಜಿ ಪ್ರೇಯಸಿಯ ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಪಶ್ಚಿಮ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆ ಮತ್ತು ವರುಣ್ ಗೆ ಪರಿಚಯವಾಗಿತ್ತು. ಮೊದಮೊದಲು ಸ್ನೇಹಿತರಾಗಿದ್ದ ಅವರು ಪ್ರೀತಿಯಲ್ಲಿ ಬಿದ್ದಿದ್ದರು. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ಕೆಲ ತಿಂಗಳಿಂದ ದೂರವಾಗಿದ್ದರು. ಆದರೆ ಪ್ರೀತಿಸುತ್ತಿದ್ದಾಗ ಇಬ್ಬರು ಖಾಸಗಿಯಾಗಿದ್ದ ವಿಡಿಯೋ ಮತ್ತು ಫೋಟೋಗಳನ್ನು ವರುಣ್ ಆರಾಧ್ಯ ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದನು.

2023ರಲ್ಲಿ ಯುವತಿ ವರುಣ್ ಮೊಬೈಲ್ ಪರಿಶೀಲಿಸಿದ್ದಾಗ ಬೇರೆ ಹುಡುಗಿಯರ ಖಾಸಗಿ ಫೋಟೋಗಳು ಇರುವುದು ತಿಳಿಯಿತು. ಈ ಬಗ್ಗೆ ಪ್ರಶ್ನೆ ಮಾಡಿದೆ. ಆಗ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ವರುಣ್ ಆರಾಧ್ಯ ವಿರುದ್ಧ ಐಟಿ ಕಾಯ್ದೆ, ಐಪಿಸಿ ಕಲಂ 504, 506ನಡಿ ಎಫ್ಐಆರ್ ದಾಖಲಿಸಿದ್ದಾರೆ.

Latest Indian news

Popular Stories