ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ 19 ನಂಬರ್ ಕ್ರಸ್ಟ್ ಗೇಟ್ನ ಚೈನ್ ತುಂಡಾಗಿ ಗೇಟ್ ಕಿತ್ತುಕೊಂಡು ಹೋಗಿದೆ. ಇದರಿಂದಾಗಿ ಅಪಾರ ಪ್ರಮಾಣದ ನೀರು ನದಿ ಪಾತ್ರಕ್ಕೆ ಬಿಡಲಾಗಿದೆ. ಒಟ್ಟು 105 ಟಿಎಂಸಿ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದ ಚೈನ್ ಕಟ್ಟಾಗಿದ್ದು ಇತಿಹಾಸದಲ್ಲೆ ಇದೇ ಮೊದಲಬಾರಿಗೆ.
1949ರಲ್ಲಿ ತುಂಗಭದ್ರಾ ಜಲಾಶಯದ ನಿರ್ಮಾಣ ಕಾರ್ಯ ಆರಂಭವಾಗಿದೆ. 1953ರಲ್ಲಿ ಜಲಾಶಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ತುಂಗಭದ್ರಾ ಜಲಾಶಯ ನಿರ್ಮಾಣ ಆರಂಭದಲ್ಲಿ ಆಂಧ್ರ, ಮದ್ರಾಸ್ ಪ್ರಾಂತ್ಯದ ಜಂಟಿ ಯೋಜನೆಯಾಗಿತ್ತು. ನಂತರ ಹೈದರಾಬಾದ್, ಮೈಸೂರು ರಾಜ್ಯದ ನಡುವೆ ಒಪ್ಪಂದದಂತೆ ಮುನಿರಾಬಾದ್ ಬಳಿ ತುಂಗಭದ್ರಾ ಡ್ಯಾಂ ನಿರ್ಮಾಣವಾಗಿದೆ.
ತುಂಗಭದ್ರಾ ಡ್ಯಾಂ ದೇಶದ ಅತಿದೊಡ್ಡ ಕಲ್ಲಿನ ಡ್ಯಾಂ ಎಂಬ ಕೀರ್ತಿ ಪಡೆದಿದೆ. ಸಿಮೆಂಟ್ ಇಲ್ಲದೇ ಸುಣ್ಣದ ಕಲ್ಲು, ಸುರ್ಕಿ ಗಾರೆಯಿಂದ ಡ್ಯಾಂ ನಿರ್ಮಾಣ ಮಾಡಲಾಗಿದೆ. ಜಲಾಶಯದ ನಿರ್ವಹಣೆಯನ್ನು ಎರಡು ರಾಜ್ಯಗಳು ನೋಡಿಕೊಳ್ಳುತ್ತವೆ. ತುಂಗಭದ್ರಾ ಜಲಾಶಯ ಕರ್ನಾಟಕದಲ್ಲಿದ್ದರೂ ಇದರ ನಿರ್ವಹಣೆ ಮಾತ್ರ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಮಾಡುತ್ತವೆ.
ಜಲಾಶಯ ಮತ್ತು ಜಲಾಶಯನ ಹಿಂಬಾಗದ ಉಸ್ತುವಾರಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ತುಂಗಭದ್ರಾ ಜಲಾಶಯ ಮಂಡಳಿ ನೋಡಿಕೊಳ್ಳುತ್ತದೆ. ತುಂಗಭದ್ರಾ ಜಲಾಶಯ ಮಂಡಳಿಗೆ ಐಎಎಸ್ ಅಧಿಕಾರಿ ಕಾರ್ಯದರ್ಶಿಯಾಗಿದ್ದಾರೆ. ತುಂಗಭದ್ರಾ ಜಲಾಶಯ ಮಂಡಳಿ ಕಚೇರಿ ಹೊಸಪೇಟೆ ಬಳಿ ಇದೆ.
ಜಲಾಶಯದ ಮುಂಬಾಗದ ವ್ಯಾಪ್ತಿ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದೆ. ಕಾಲುವೆಗಳ ನಿರ್ವಹಣೆ, ರಿಪೇರಿ ಮಾಡುದಷ್ಟೇ ನಿಗಮಕ್ಕೆ ಸೇರಿದೆ. ತುಂಗಭದ್ರಾ ವಲಯ ಕಚೇರಿ ಮುನಿರಾಬಾದ್ನಲ್ಲಿದೆ. ಸಿಇ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದಾರೆ.
ಈ ಹಿಂದೆ 2019 ರಲ್ಲಿ ಎಲ್ಎಲ್ಸಿ ಕಾಲುವೆಯ ಚೈನ್ ತುಂಡಾಗಿ ಗೇಟ್ ಕಿತ್ತುಕೊಂಡು ಹೋಗಿತ್ತು. ಆಗ ಕೂಡ ಕೆಲ ದಿನಗಳ ಕಾಲ ಆತಂಕ ಮನೆ ಮಾಡಿತ್ತು. ಕಾಲುವೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ವಾರಗಳ ಕಾಲ ಅದನ್ನು ರಿಪೇರಿ ಮಾಡಲಾಗಿತ್ತು. ಆದರೆ ಡ್ಯಾಂ ನಿರ್ಮಾಣವಾದ ನಂತರ ಮೊದಲ ಬಾರಿಗೆ ಕ್ರಸ್ಟ್ ಗೇಟ್ ಕಿತ್ತುಕೊಂಡು ಹೋಗಿದೆ.
ತುಂಡಾಗಿರು ಚೈನ್ ರಿಪೇರಿ ಮಾಡಿ, ಹೊಸ ಗೇಟ್ ಕೂಡಿಸಬೇಕೆಂದರೆ ಜಲಾಶಯದಲ್ಲಿನ ಸರಿ ಸುಮಾರು 65 ಟಿಎಂಸಿ ನೀರು ಖಾಲಿ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಡ್ಯಾಂನಲ್ಲಿನ ನೀರು ಖಾಲಿಯಾಗಬೇಕಾದರೆ 4-5 ದಿನ ಬೇಕಾಗಬಹುದು. ಇದಕ್ಕೆ ಪ್ರತಿದಿನ 2 ಲಕ್ಷ ಕ್ಯೂಸೆಕ್ ನೀರು ನದಿ ಪಾತ್ರಕ್ಕೆ ಬಿಡಬೇಕಾಗುತ್ತದೆ. ಒಂದು ವೇಳೆ ಇಷ್ಟು ನೀರು ಹೊರಕ್ಕೆ ಬಿಟ್ಟರೆ ಜಲಾಶಯ ಶೇ 60 ರಷ್ಟು ಖಾಲಿಯಾಗಲಿದೆ.
ಗೇಟ್ ದುರಸ್ಥಿಗೆ ಒಂದು ವಾರಕ್ಕೂ ಹೆಚ್ಚು ಸಮಯದ ಅವಶ್ಯಕತೆ ಇದೆ. ಹೈದರಾಬಾದ್ ಮೂಲದ ಕಂಪನಿಯಿಂದ ಹೊಸ ಗೇಟ್ನ್ನು ತಂದು ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ಗೇಟ್ ಡಿಸೈನ್ ಅನ್ನು ಅಧಿಕಾರಿಗಳು ಕಂಪನಿಗೆ ಕಳುಹಿಸಿದ್ದಾರೆ. ಆದರೆ ಹೊಸಗೇಟ್ ಸಿದ್ಧವಾಗಿ, ಅಳವಡಿಸಬೇಕಾದರೆ ವಾರಕ್ಕೂ ಹೆಚ್ಚು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಸ್ತಿ ಕಾರ್ಯ ವಿಳಂಭವಾದಷ್ಟು ನೀರು ಖಾಲಿಯಾಗುವ ಆತಂಕ ಶುರುವಾಗಿದೆ.
ತುಂಗಭದ್ರಾ ಜಲಾಶಯ ಮುಂದಿನ ಕಿರು ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಬರುತ್ತಿರುವ ಜನರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.