ಹಾಸನ, ಸೆ.17: ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿದ್ದ ಚೈತ್ರಾ ಕುಂದಾಪುರ ಜತೆ ಆರೋಪಿಯಾಗಿರುವ ಗಗನ್‌ಕುಮಾರ್‌ಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸಾಲುಮರದ ತಿಮ್ಮಕ್ಕ ಸ್ಪಷ್ಟಪಡಿಸಿದ್ದಾರೆ.
ಆರೋಪಿ ಗಗನ್ ಜೊತೆಗಿನ ಸಂಬಂಧವನ್ನು ಆರೋಪಿಸಿ ಸುದ್ದಿ ವಾಹಿನಿಯೊಂದರಲ್ಲಿ ಮಾಧ್ಯಮ ವರದಿಗಳ ಕುರಿತು ಅವರು ಪ್ರತಿಕ್ರಿಯಿಸಿದರು.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ಒಂದಷ್ಟು ಸುದ್ದಿಗಳು ಬರುತ್ತಿವೆ, ಹೇಗೋ ಗಿಡ ಮರಗಳನ್ನು ನೆಟ್ಟು ಜೀವನ ನಡೆಸುತ್ತಿದ್ದೇವೆ.ಸರ್ಕಾರಕ್ಕೆ ಹೆದರಿ ಬದುಕುತ್ತಿದ್ದೇವೆ, ಯಾವತ್ತೂ ಈ ರೀತಿಯ ಚರ್ಚೆಗಳು ಮತ್ತು ವಿವಾದಗಳಲ್ಲಿ ತೊಡಗಿಸಿಕೊಳ್ಳಿಲ್ಲ. ಈ ಎಲ್ಲದರ ಬಗ್ಗೆ ನಮಗೆ ಏನೂ ತಿಳಿದಿಲ್ಲ ಎಂದರು.
ಸಾಲುಮರದ ತಿಮ್ಮಕ್ಕ ಅವರ ದತ್ತುಪುತ್ರ ಬಳ್ಳೂರು ಉಮೇಶ್ ಮಾತನಾಡಿ, ಗಗನ್ ಕಡೂರು ಅವರ ಮದುವೆಗೆ ನಾವು ಪಾಲ್ಗೊಂಡಿದ್ದು ನಿಜ.ತಿಮ್ಮಕ್ಕರಗೆ ನಾಡಿನಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ.ಅವರು ಬಂದು ಫೋಟೋ ತೆಗೆಸಿಕೊಂಡು ಹೋಗುತ್ತಾರೆ.ನಾವು ಬೇಡ ಎನ್ನುವಂತಿಲ್ಲ ಕೆಲವೊಮ್ಮೆ ಬಂದು ಕರೆಯುತ್ತಾರೆ, ಮದುವೆ ಕಾರ್ಯಕ್ರಮಗಳಿಗೂ ಹೋಗುತ್ತೇವೆ . ಹಾಗೆಯೇ ನಾವು ಗಗನ್ ಮದುವೆಗೆ ಹೋಗಿದ್ದೆವು ಎಂದರು.
“ಗಗನ್ ಭಾರತೀಯ ಅಯ್ಯಪ್ಪಸ್ವಾಮಿ ಸೇನಾ ಸಮಿತಿಯ ಸದಸ್ಯ. ನಾನು ಅದರ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಗಗನ್ ತಿಮ್ಮಕ್ಕನ ಕಾರನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪ್ರತಿಷ್ಠಿತ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ವಿಧಾನಸೌಧದಲ್ಲಿ ಆರೋಪಿ ಗಗನ್ ತಿಮ್ಮಕ್ಕನ ಕೊಠಡಿಯನ್ನು ಪಡೆದಿರುವ ಸಾಧ್ಯತೆಯಿದೆ ಎಂದು ಪ್ರಸಾರವಾಗಿದೆ. ಆದರೆ, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಅವರು ತಪ್ಪು ಮಾಡಿದ್ದರೆ ಶಿಕ್ಷೆಗೆ ಗುರಿಯಾಗಲಿ, ಆದರೆ, ನಮ್ಮ ಹೆಸರು ಹೇಳುವುದು ತಪ್ಪು,” ಎಂದರು.
ಮಾನನಷ್ಟ ಮೊಕದ್ದಮೆ
“ಸರ್ಕಾರ ತಿಮ್ಮಕ್ಕನ ಕೊಠಡಿಯನ್ನು ನವೀಕರಿಸುತ್ತದೆ, ಅದನ್ನು ನವೀಕರಿಸಲು ಗಗನ್ ಯಾರು? ಗಗನ್ ತಿಮ್ಮಕ್ಕನ ಕಾರನ್ನು ದುರ್ಬಳಕೆ ಮಾಡಿಕೊಂಡಿದ್ದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿ, ನಾವು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದೇವೆಯೇ ಹೊರತು ದ್ರೋಹ ಮಾಡುತ್ತಿಲ್ಲ ಎಂದು ಉಮೇಶ್ ಹೇಳಿದರು.
“ಈಗ ಸರ್ಕಾರ ತಿಮ್ಮಕ್ಕ ಅವರಿಗೆ ಕ್ಯಾಬಿನೆಟ್ ದರ್ಜೆ ನೀಡಿ ಗೌರವಿಸುತ್ತಿದೆ.ಇಡೀ ಸಮಾಜ ನಮ್ಮನ್ನು ಗೌರವಿಸುತ್ತದೆ, ಈ ಹೊತ್ತಿನಲ್ಲಿ ನಾವು ತಪ್ಪು ಮಾಡುತ್ತೇವೆಯೇ? ಗಗನ್ ಮತ್ತು ನಮ್ಮ ನಡುವೆ ಸಂಬಂಧವನ್ನು ಹೆಣೆದಿರುವ ವಾಹಿನಿಯ ಆ್ಯಂಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು” ಎಂದು ಅವರು ಹೇಳಿದರು.
ತಿಮ್ಮಕ್ಕ ಅವರಿಗೆ ಸಂಪುಟ ಸ್ಥಾನಮಾನ ನೀಡಿರುವುದನ್ನು ಕಂಡು ಹೊಟ್ಟೆಕಿಚ್ಚು ಪಡುವ ಕೆಲವರು ನಮ್ಮ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುವುದಾಗಿ ಬಳ್ಳೂರು ಉಮೇಶ್ ತಿಳಿಸಿದರು.