ಚಂಡೀಗಢ: ಮಹತ್ವದ ಬೆಳವಣಿಗೆಯೊಂದರಲ್ಲಿ ಮೇಯರ್ ಮನೋಜ್ ಸೋಂಕರ್ ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಹೊಸ ಮೇಯರ್ ಆಯ್ಕೆಗೆ ದಾರಿ ಮಾಡಿಕೊಟ್ಟಿದ್ದಾರೆ. ಮೇಯರ್ ಚುನಾವಣೆಯ ಪಾರದರ್ಶಕತೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದೆ.
ಎಎಪಿಯ ಮೂವರು ಕೌನ್ಸಿಲರ್‌ಗಳಾದ ಗುರ್ಚರಂಜಿತ್ ಸಿಂಗ್ ಕಲಾ, ನೇಹಾ ಮತ್ತು ಪೂನಂ ದೇವಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
35 ಸದಸ್ಯ ಬಲದ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿ 15, ಎಎಪಿ 13, ಕಾಂಗ್ರೆಸ್ 7 ಮತ್ತು ಶಿರೋಮಣಿ ಅಕಾಲಿದಳ ಒಂದು ಸ್ಥಾನ ಹೊಂದಿದ್ದವು. ಬಿಜೆಪಿಗೆ ಮೂವರು ಆಪ್ ಸದಸ್ಯರ ಸೇರ್ಪಡೆಯಿಂದ ಬಿಜೆಪಿ ಸದಸ್ಯರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಆಪ್ ಸದಸ್ಯರ ಸಂಖ್ಯೆ 10ಕ್ಕೆ ಇಳಿದಿದೆ.
ಚಂಡೀಗಢದಲ್ಲಿ ಜನವರಿ 30 ರಂದು ನಡೆದ ಮೇಯರ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಂಚೆ ಮತಪತ್ರಗಳನ್ನು ತಿರುಚಿದೆ ಎಂದು ಆರೋಪಿಸಿ ಎಎಪಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಈ ಹಿಂದೆ 2024 ರ ಫೆಬ್ರವರಿ 19 ಕ್ಕೆ ನಿಗದಿಪಡಿಸಿತ್ತು.
2023ರ ಜನವರಿಯಲ್ಲಿ ಮೇಯರ್ ಚುನಾವಣೆ ನಡೆದಾಗ ಒಟ್ಟು 29 ಮತಗಳು ಚಲಾವಣೆಯಾಗಿದ್ದವು. ಬಿಜೆಪಿಯ ಅನುಪ್ ಗುಪ್ತಾ ಅವರು ಎಎಪಿಯ ಜಸ್ಬೀರ್ ಸಿಂಗ್ ಲಾಡಿ ಅವರನ್ನು ಕೇವಲ ಒಂದು ಮತದಿಂದ ಸೋಲಿಸಿದರು. ಗುಪ್ತಾ 15 ಮತಗಳನ್ನು ಪಡೆದರೆ, ಸಿಂಗ್ 14 ಮತಗಳನ್ನು ಪಡೆದರು. ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಚುನಾವಣೆಯಿಂದ ದೂರ ಉಳಿದಿದ್ದವು. 2022ರಲ್ಲಿಯೂ ಒಂದು ಮತ ಅಸಿಂಧುವಾದ ಕಾರಣ ಬಿಜೆಪಿ ಅಭ್ಯರ್ಥಿ ಕೇವಲ ಒಂದು ಮತದ ಅಂತರದಿಂದ ಗೆದ್ದಿದ್ದರು.