
ಕರಾವಳಿಯಲ್ಲಿ ಚುರುಕುಗೊಳ್ಳದ ಮಳೆ!
ಉಡುಪಿ: ಸಾಮಾನ್ಯವಾಗಿ ಕರಾವಳಿಯಲ್ಲಿ ಜೂನ್’ನಲ್ಲಿ ವ್ಯಾಪಕ ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಎಪ್ರಿಲ್,ಮೇ ನಲ್ಲಿ ವಿಪರೀತ ತಾಪಮಾನ ಅನುಭವಿಸಿದ್ದ ಕರಾವಳಿಯಲ್ಲಿ ಜೂನ್’ನಲ್ಲೂ ಮಳೆ ಕ್ಷೀಣವಾಗಿದೆ.
ಜೂನ್ ಆರಂಭದಲ್ಲಿ ಬಿಪೋರ್’ಜಾಯ್ ಚಂಡಮಾರುತದ ಕಾರಣ ಮಾನ್ಸೂನ್ ಕ್ಷೀಣಗೊಂಡ ಕಾರಣ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ಇದೀಗ ಕರಾವಳಿಯಲ್ಲಿ ಮಳೆಯಾಗಿತ್ತಿದ್ದರೂ ವಾಡಿಕೆಯಂತೆ ರಭಸದ ಮಳೆ ಕಾಣ ಸಿಗುತ್ತಿಲ್ಲ. ಸಹಜವಾಗಿ ಜೂನ್ 7 ರ ನಂತರ ಗಾಳಿ ಸಹಿತ ಭಾರೀ ಮಳೆಯಾಗುವುದು ಕೃಷಿ ಚಟುವಟಿಕೆಗಳಲ್ಲಿ ರೈತರು ಸಕ್ರಿಯವಾಗುವುದು ಪ್ರಕ್ರಿಯೆ. ಈ ಬಾರಿ ಮಳೆ ಕ್ಷೀಣವಾಗಿದ್ದು ಪರಿಸರ ಮನುಷ್ಯರ ಮೇಲೆ ಮುನಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ಮಳೆಯ ಕೊರತೆ ಉಂಟಾಗಿದ್ದು, ರೈತರು ಆತಂಕದಲ್ಲೇ ಕಾಲ ದೂಡುವಂತಾಗಿದೆ. ಮುಂಗಾರು ಹಂಗಾಮಿನ ಬಿತ್ತನೆ ಮಾಡಿರುವ ಬೆಳೆ ಒಂದೆಡೆ ಒಣಗುತ್ತಿದ್ದರೆ, ಮತ್ತೊಂದೆಡೆ ಬಿತ್ತನೆಗೆ ಭೂಮಿ ಹದಗೊಳಿಸಲಾಗುತ್ತಿಲ್ಲ. ಅಲ್ಲದೆ, ಹದಗೊಳಿಸಿರುವ ಕಡೆಗಳಲ್ಲಿ ಬಿತ್ತನೆ ಮಾಡಲು ತೇವಾಂಶ ಸಾಲುತ್ತಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಇನ್ನೂ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿಲ್ಲ. ಸಂಗ್ರಹವಾಗಿದ್ದ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಕಳೆದ ಬಾರಿಯ ಮುಂಗಾರು ವಾಡಿಕೆಗಿಂತ ಹೆಚ್ಚಾಗಿ ಎಲ್ಲಾ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದವು. ಈ ಬಾರಿ ನೀರಾವರಿ ಆಶ್ರಿತ ಬೆಳೆಗೂ ಮಳೆಯ ಅಭಾವದಿಂದ ಆತಂಕ ದೂರವಾಗಿಲ್ಲ. ಹೀಗಾಗಿ ಸಧ್ಯದ ಲಭ್ಯ ಮಾಹಿತಿ ಪ್ರಕಾರ ರಾಜ್ಯದ ಮೇಲೆ ಬರದ ಕರಾಳ ಛಾಯೆ ಆವರಿಸುವ ಲಕ್ಷಣಗಳು ಗೋಚರಿಸತೊಡಗಿವೆ.
ಪ್ರಾರಂಭದ ಮೂರು ವಾರವೂ ಮುಂಗಾರು ದುರ್ಬಲವಾಗಿದ್ದು, ಈಗ ಚೇತರಿಸಿಕೊಳ್ಳುತ್ತಿ ದೆಯಾದರೂ ಮಳೆ ಕೊರತೆ ನೀಗಿಸುವುದು ಅನುಮಾನ. ದೇಶದ ಶೇ.71ರಷ್ಟು ಜಿಲ್ಲೆಗಳು ಈಗಾಗಲೇ ಮಳೆ ಕೊರತೆಯನ್ನು ಎದುರಿಸುತ್ತಿದ್ದು, ಕರ್ನಾಟಕದ ಶೇ.97ರಷ್ಟು ಜಿಲ್ಲೆಗಳು ಮಳೆ ಕೊರತೆಗೆ ತುತ್ತಾಗಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಮತ್ತು ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ಈ ಸಂಜೆಗೆ ತಿಳಿಸಿದರು.
ನಿನ್ನೆಯವರೆಗಿನ ಮಾಹಿತಿ ಪ್ರಕಾರ ರಾಜ್ಯದ ಕೋಲಾರ ಜಿಲ್ಲೆಯನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ಬಾರಿಯ ವಿಶೇಷವೆಂದರೆ, ಸದಾ ಬರ ಪರಿಸ್ಥಿತಿಗೆ ಒಳಗಾಗುತ್ತಿದ್ದ ಕೋಲಾರ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದರು.
ಈಗಾಗಲೇ ಶೇ.93ರಷ್ಟು ತಾಲ್ಲೂಕು ಹಾಗೂ ಶೇ.85ರಷ್ಟು ಹೋಬಳಿಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಮುಂದಿನ ಹತ್ತು ದಿನದಲ್ಲಿ ಬೀಳಬಹುದಾದ ಮಳೆಯ ಮುನ್ಸೂಚನೆ ಗಮನದಲ್ಲಿಟ್ಟುಕೊಂಡರೂ ರಾಜ್ಯದಲ್ಲಿ ಮಳೆ ಕೊರತೆ ಪ್ರಮಾಣ ಶೇ.30 ರಷ್ಟು ಕಡಿಮೆಯಾಗಬಹುದು ಅಷ್ಟೇ. ಶೇ.50ರಿಂದ 60ರಷ್ಟು ಮಳೆ ಅಭಾವ ಪರಿಸ್ಥಿತಿ ಮುಂದುವರೆಯುವ ಸೂಚನೆಗಳಿವೆ ಎಂದು ಅವರು ವಿವರಿಸಿದರು.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ. 25ರಿಂದ 30 ತಾಲ್ಲೂಕುಗಳಲ್ಲಿ ಮಳೆ ಕೊರತೆ ಕಂಡುಬರುವ ಸಾಧ್ಯತೆಗಳಿವೆ. ಮಲೆನಾಡು ಭಾಗದಲ್ಲಿ ಶೇ.75ರಿಂದ 80ರಷ್ಟು, ಉತ್ತರ ಒಳನಾಡಿನಲ್ಲಿ ಶೇ.70ರಷ್ಟು ಹಾಗೂ ಕರಾವಳಿಯಲ್ಲಿ ಶೇ.45ರಿಂದ 50 ತಾಲ್ಲೂಕುಗಳಲ್ಲಿ ಮಳೆ ಕೊರತೆ ಉಂಟಾಗುವ ಸೂಚನೆಗಳಿವೆ. ಅಂದರೆ, ಜುಲೈ ತಿಂಗಳ ಮೊದಲ ವಾರದಲ್ಲಿ ರಾಜ್ಯದ 120ರಿಂದ 130 ತಾಲ್ಲೂಕುಗಳು ಮಳೆ ಕೊರತೆ ಎದುರಿಸುವಂತಾಗಬಹುದು. ಹೀಗಾಗಿ ರಾಜ್ಯದಲ್ಲಿ ಶೇ.50ರಿಂದ 60ರಷ್ಟು ಮಳೆಯ ಅಭಾವ ಪರಿಸ್ಥಿತಿ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.




