ಬೆಂಗಳೂರು: ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ವಾಗ್ದಾಳಿ ಮುಂದುವರಿಸಿವೆ. ಈ ಪಾಕ್ ಜೀನ್ ನವರೊಂದಿಗಿನ ಪ್ರೇಮ ಮೂಡಿದ್ದರಿಂದಲೇ ಕುಮಾರಸ್ವಾಮಿಯವರಿಗೆ ರಾಷ್ಟ್ರಧ್ವಜದ ಮೇಲೆ ದ್ವೇಷ ಮೂಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಂಘಿಗಳ ಕಣ್ಮಣಿಯಾಗಲು ಹೊರಟಿರುವ ಮಿಣಿ ಮಿಣಿ ಕುಮಾರಣ್ಣರಿಗೆ ಪಾಕಿಸ್ತಾನದ ಮೇಲೆ ಪ್ರೇಮ ಉಕ್ಕಿ ಹರಿಯುತ್ತಿದೆ! ಬಿಜೆಪಿಗರ ಜೀನ್ ಪಾಕಿಸ್ತಾನದ್ದು ಎಂದು ಎಚ್.ಡಿ ಕುಮಾರಸ್ವಾಮಿ ಅವರೇ ಹೇಳಿದ್ದರು, ಈಗ ಅದೇ ಪಾಕಿಸ್ತಾನದ ಜೀನ್ ನವರ ಜೊತೆ ಕೂಡಿಕೆ ಮಾಡಿಕೊಂಡಿದ್ದಾರೆ ಎಂದರೆ ಪಾಕಿಸ್ತಾನದ ಮೇಲೆ ಪ್ರೇಮ ಮೂಡಿದೆ ಎಂದರ್ಥ! ಈ ಪಾಕ್ ಜೀನ್ ನವರೊಂದಿಗಿನ ಪ್ರೇಮ ಮೂಡಿದ್ದರಿಂದಲೇ ಕುಮಾರಸ್ವಾಮಿಯವರಿಗೆ ರಾಷ್ಟ್ರಧ್ವಜದ ಮೇಲೆ ದ್ವೇಷ ಮೂಡಿದೆ ಎಂದಿದೆ.
ಇದು ಕುಮಾರಸ್ವಾಮಿ ಅವರ ಉವಾಚ, ಹೌದು ಇದು ಅವರದ್ದೇ ಹೇಳಿಕೆ! RSS ನಿಂದ ಸ್ವಾಗತ ಪಡೆಯುವ ದುಸ್ಥಿತಿ ನನಗೆ ಬಂದಿಲ್ಲ ಎಂದಿದ್ದ ಕುಮಾರಸ್ವಾಮಿಯವರು ಈಗ ಅದೇ RSS ನ ಗೇಟ್ ಕೀಪರ್ ಆಗಿ, ವಿನಮ್ರ ಸೇವಕನಾಗಿ ಹಸಿರು ಶಾಲನ್ನು ಕಿತ್ತೆಸೆದು ಕೇಸರಿ ಶಾಲು ಹಾಕಿಕೊಂಡಿದ್ದೀರಿ. ಇದು ನಿಮಗೆ ದುಸ್ಥಿತಿ ಬಂದಿದ್ದರ ಸಂಕೇತವಲ್ಲವೇ? ವಯಸ್ಸಾದ ದೇವೇಗೌಡರನ್ನು ಕರೆದುಕೊಂಡು ಬಿಜೆಪಿ ನಾಯಕರ ಮನೆ ಬಾಗಿಲಿಗೆ ಅಲೆಯುತ್ತಿರುವುದು ನಿಮಗೊದಗಿದ ದುಸ್ಥಿತಿಯ ದ್ಯೋತಕವಲ್ಲವೇ?ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಹೆಚ್ಡಿ ಕುಮಾರಸ್ವಾಮಿ ಅವರು ಬಿಜೆಪಿಯವರಿಗೆ ಕಾಂಪಿಟೇಷನ್ ಕೊಡುವಂತೆ ಬಿಜೆಪಿಯವರಿಗಿಂತ ದೊಡ್ಡ ಚಡ್ಡಿ ಹಾಕಿದ್ದಾರೆ. ಇದೇ ಕುಮಾರಸ್ವಾಮಿ ಕೆಲವೇ ತಿಂಗಳುಗಳ ಹಿಂದೆ RSS ಬಗ್ಗೆ ಯಾವ ರೀತಿ ಹೇಳಿದ್ದರು ಎಂಬುದನ್ನು ರಾಜ್ಯ ಕಂಡಿದೆ ಎಂದು ಕಾಂಗ್ರೆಸ್ ಹೇಳಿದೆ. ಈಗ ಅದೇ RSSನ ಸೇವಕನಾಗಿ, ಕಾಲಾಳಾಗಿ ಮಂಡ್ಯ ಜಿಲ್ಲೆಗೆ ಬೆಂಕಿ ಹಚ್ಚುವ ಗುತ್ತಿಗೆ ಪಡೆದಿರುವುದು ಅತ್ಯಂತ ಕೊಳಕು ರಾಜಕಾರಣ. ಕುಮಾರಸ್ವಾಮಿಯವರೇ ನೀವೇ ಬರೆದದ್ದನ್ನು ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ ಎಂದು ಹಳೆ ಹೇಳಿಕೆಯನ್ನು ಕಾಂಗ್ರೆಸ್ ಹಂಚಿಕೊಂಡಿದೆ.