ಟಿಕೆಟ್ ಕೈ ತಪ್ಪುತ್ತಿದ್ದಂತೆ ಮೌನಕ್ಕೆ ಜಾರಿದ “ವಿವಾದಿತ” ಅನಂತ್ ಕುಮಾರ್ ಹೆಗಡೆ; ಅಮಿತ್​ ಶಾ ಕರೆ ಮಾಡಿದ್ರು ಸ್ವೀಕರಿಸದೆ ಡೋಂಟ್ ಕೇರ್!

ಮಾತಾಡಿದ್ರೆ ದ್ವೇಷ ಉಗುಳಿ ವಿವಾದ ಸೃಷ್ಟಿಸುತ್ತಿದ್ದ ಉತ್ತರ ಕನ್ನಡ ಸಂಸದ ಅನಂತ್​ ಕುಮಾರ್​​ ಹೆಗಡೆ (Anantkumar Hegde) ಆರು ಬಾರಿ ಬಿಜೆಪಿ ಸಂಸದನಾಗಿದ್ದರು. ಈ ಬಾರಿಯೂ ಟಿಕೆಟ್ ಸಿಗುತ್ತದೆ ಎಂಬ ನೀರಿಕ್ಷೆಯಲ್ಲಿದ್ದ ಅವರು, ಡಿಸೆಂಬರ್​ನಿಂದ ಮಾರ್ಚ್​ವರೆಗೆ ಕ್ಷೇತ್ರದಾದ್ಯಂತ ಸಂಚರಿಸಿ ಚುನಾವಣೆಗೆ ಪ್ರಚಾರ ಆರಂಭ ಮಾಡಿದ್ದರು. ಕೊನೆಯ ಹಂತದಲ್ಲಿ ಟಿಕೆಟ್ ಮಿಸ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲಾಗಿದೆ. ಹೀಗಾಗಿ ಮುನಿಸಿಕೊಂಡಿರುವ ಅನಂತ್​ ಕುಮಾರ್​, ಇದುವರೆಗೂ ಬಹಿರಂಗವಾಗಿ ಕಾಣಿಸಿಕೊಳ್ಳದೆ, ಒಂದೇ ಒಂದು ಹೇಳಿಕೆಯನ್ನು ಕೊಡದೆ ಮೌನಕ್ಕೆ ಜಾರಿದ್ದಾರೆ.

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅನಂತ್​ ಕುಮಾರ್​ ಸೈಲೆಂಟ್ ಆಗಿದ್ದುಕೊಂಡು ಪರೋಕ್ಷವಾಗಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ್ದರೂ ಎಂಬ ಮಾತಿದೆ. ಈಗ ಮತ್ತೆ ಅವರ ಮೌನ ಕಮಲ ಅಭ್ಯರ್ಥಿ ಕಾಗೇರಿ ಸೇರಿದಂತೆ ಇನ್ನೂಳಿದ ನಾಯಕರಿಗೂ ಟೆನ್ಷನ್ ತಂದಿಟ್ಟಿದೆ. ಅವರ ಭೇಟಿಗೆ ಅವಕಾಶ ಕೊಡಿ ಎಂದು ಕಾಗೇರಿ ಕರೆ ಮಾಡಿ ಕೇಳಿದರೂ ಸರಿಯಾಗಿ ಪ್ರತಿಕ್ರಿಯಿಸದೆ ಇದುವರೆಗೂ ಭೇಟಿಗೂ ಅವಕಾಶ ಕೊಟ್ಟಿಲ್ಲ. ಹೇಗಾದರೂ ಮಾಡಿ ಅನಂತ್​ ಕುಮಾರ್​ ಮುನಿಸು ತಣ್ಣಗಾಗಿಸಲು ಉತ್ತರ ಕನ್ನಡ ಲೋಕಸಭಾ ಉಸ್ತುವಾರಿ ಹರತಾಳು ಹಾಲಪ್ಪ, ಅವರ ಮನೆಗೆ ಭೇಟಿ ನೀಡಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ತಿಳಿದು ಬಂದಿದೆ.

ಇನ್ನು ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ , ಆರ್ ಎಸ್ ಎಸ್ ಮುಖ್ಯಸ್ತರು ಸೇರಿದಂತೆ ಕೆಲವರು ಕರೆ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾರೆ. ಅನಂತ್​ ಕುಮಾರ್​ ಇವರ ಯಾರ ಕರೆಯನ್ನ ಸ್ವಿಕರಿಸದೆ ಸೈಲೆಂಟ್ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಬನಸಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ.  ಬಿಜೆಪಿ ರಾಷ್ಟ್ರೀಯ ನಾಯಕರ ಕರೆಯನ್ನೆ ಸ್ವಿಕರಿಸದೆ ಮೊಂಡುತನ ತೋರಿದ ಅನಂತ್​ ಕುಮಾರ್​, ಲೋಕಸಭಾ ಚುನಾವಣೆಯ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ದೂರ ಉಳಿದು ಬಿಜೆಪಿಗೆ ಸಡ್ಡು ಹೊಡೆದಿದ್ದಾರೆ.

Latest Indian news

Popular Stories