ದ.ಕ | ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ಎನ್ನುವಲ್ಲಿ ಕೋಮುದ್ವೇಷದಿಂದ ಮೊಹಮ್ಮದ್‌ ಮುಸ್ತಾಫ ಮತ್ತು ಮಹಮ್ಮದ್‌ ನಾಸೀರ್‌ ಅವರ ಮೇಲೆ ತಲವಾರ್‌ನಿಂದ ಹಲ್ಲೆ ನಡೆಸಿ, ನಾಸಿರ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರೂ. ದಂಡ ವಿಧಿಸಿದೆ.

ಬಂಟ್ವಾಳ ತಾಲೂಕು ಮಂಚಿ ಗ್ರಾಮದ ವಿಜೇತ್‌ ಕುಮಾರ್‌ (31), ಅಭಿ ಯಾನೆ ಅಭಿಜಿತ್‌ (33) ಮಂಗಳೂರು ತಾಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿಮನೆ ಕಿರಣ್‌ ಪೂಜಾರಿ (33), ತಿರುವೈಲು ಗ್ರಾಮದ ಅನೀಶ್‌ ಯಾನೆ ಧನು (32) ಶಿಕ್ಷೆಗೊಳಗಾದವರು.

ಪ್ರಕರಣದಲ್ಲಿ ಒಟ್ಟು 29 ಸಾಕ್ಷಿದಾರರನ್ನು ವಿಚಾರಿಸಲಾಗಿದ್ದು, 40 ದಾಖಲೆಗಳನ್ನು ಗುರುತಿಸಲಾಗಿತ್ತು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು ವಾದ-ಪ್ರತಿವಾದವನ್ನು ಆಲಿಸಿ, ದೋಷಿಗಳೆಂದು ಎ. 8ರಂದು ತೀರ್ಪು ನೀಡಿದ್ದರು. ಎ. 30ರಂದು ಶಿಕ್ಷೆ ಪ್ರಕಟಿಸಿದ್ದಾರೆ.
ಐಪಿಸಿ ಕಲಂ 302, ಸಹವಾಚಕ ಕಲಂ 120 (ಬಿ)ಯಡಿ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ. ದಂಡ ಪಾವತಿಸಲು ವಿಫಲರಾದರೆ 1 ವರ್ಷ ಜೈಲು. ಕಲಂ 307 ಮತ್ತು ಸಹವಾಚಕ ಕಲಂ120 (ಬಿ)ಯಡಿ 5 ವರ್ಷ ಜೈಲು ಮತ್ತು ತಲಾ 5 ಸಾವಿರ ರೂ. ದಂಡ. ದಂಡ ಪಾವತಿಸುವಲ್ಲಿ ವಿಫಲನಾದರೆ 6 ತಿಂಗಳ ಜೈಲು. ಕಲಂ 341 ಮತ್ತು ಸಹವಾಚಕ ಕಲಂ120 (ಬಿ)ಯಡಿ 1 ತಿಂಗಳ ಜೈಲು, ಕಲಂ 324, ಸಹವಾಚಕ ಕಲಂ 120 (ಬಿ)ಯಡಿ 1 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದ ಮೊತ್ತ 1.20 ಲಕ್ಷ ರೂ. ಅನ್ನು ಮೃತ ನಾಸೀರ್‌ ಅವರ ಪತ್ನಿ ರಹಮತ್‌ ಯಾನೆ ರಮ್ಲತ್‌ಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತ ಪರಿಹಾರ ಯೋಜನೆಯಡಿ ಮೃತರ ಪತ್ನಿ ಮತ್ತು ಗಾಯಾಳು ಮುಸ್ತಾಫ ಅವರಿಗೆ ಪರಿಹಾರ ನೀಡಬೇಕು ಎಂದು ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ.

ಸರಕಾರದ ಪರ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತ ಅವರು ವಾದ ಮಂಡಿಸಿದ್ದರು.
ಪ್ರಕರಣದ ವಿವರ
2015ರ ಆಗಸ್ಟ್‌ 6ರಂದು ಮೊಹಮ್ಮದ್‌ ಮುಸ್ತಫಾ ಅವರು ಮಾವನ ಪತ್ನಿಯನ್ನು ಆಟೋ ರಿಕ್ಷಾದಲ್ಲಿ ಬಿಟ್ಟು ಹಿಂದೆ ಬರುತ್ತಿರುವಾಗ ಮೆಲ್ಕಾರ್‌ ಬಳಿ ನಾಸೀರ್‌ ಯಾನೆ ಮಹಮ್ಮದ್‌ ನಾಸೀರ್‌ ಅವರು ಪತ್ನಿ ಮನೆಗೆ ಹೋಗುವ ಉದ್ದೇಶದಿಂದ ಆಟೋ ಹತ್ತಿದ್ದರು. ಮೆಲ್ಕಾರ್‌ ಕಡೆಯಿಂದ ಮುಡಿಪು ಕಡೆಗೆ ಆಟೋ ಹೋಗುತ್ತಿದ್ದಾಗ ಶಿಕ್ಷೆಗೊಳಗಾದ ನಾಲ್ವರು ಆಟೋದಲ್ಲಿರುವವರು ಮುಸ್ಲಿಂ ಸಮುದಾಯದವರು ಎಂಬುದನ್ನು ಖಚಿತಪಡಿಸಿಕೊಳ್ಳಲು ಬೊಳ್ಳಾಯಿಗೆ ಹೋಗುವ ರಸ್ತೆ ಕುರಿತು ವಿಚಾರಿಸಿದ್ದಾರೆ.
ಆಟೋ ಚಾಲಕ ರಸ್ತೆಯನ್ನು ತೋರಿಸಿ, ಮುಂದಕ್ಕೆ ಚಲಾಯಿಸಿದ್ದಾರೆ. ಮತ್ತೆ ಬೈಕ್‌ನಲ್ಲಿ ಹಿಂಬಾಲಿಸಿದ ಅವರು ರಾತ್ರಿ 10.45ಕ್ಕೆ ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ಎಂಬಲ್ಲಿಗೆ ತಲುಪುತ್ತಿದ್ದಂತೆ ಓವರ್‌ಟೇಕ್‌ ಮಾಡಿ ರಿಕ್ಷಾವನ್ನು ತಡೆದು ನಿಲ್ಲಿಸಿ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ತೀವ್ರ ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ನಾಸೀರ್‌ ಅಹಮ್ಮದ್‌ ಅವರು ಆ. 7ರಂದು ಮೃತಪಟ್ಟಿದ್ದರು.

Latest Indian news

Popular Stories