ದಂಪತಿ ಆತ್ಮಹತ್ಯೆ: ಕೊಳೆತ ಶವಗಳ ಮಧ್ಯೆ ಇದ್ದ ಆರು ದಿನದ ಮಗು!

ಪೋಷಕರು ಸತ್ತು ಮೂರು ದಿನಗಳೇ ಕಳೆದಿವೆ, ದೇಹಗಳು ಕೊಳೆಯುತ್ತಿವೆ, ಕೆಟ್ಟ ವಾಸನೆ ಈ ಮೂರು ದಿನ 6 ದಿನಗಳ ಮಗು ಈ ಶವಗಳ ಮಧ್ಯೆಯೇ ಇತ್ತು. ಈಗಷ್ಟೇ ಕಣ್ಣು ತೆರೆದು ಪ್ರಪಂಚ ನೋಡಿದ್ದಷ್ಟೇ, ತಾಯಿಯ ಎದೆ ಹಾಲಿಲ್ಲ, ಅತ್ತಾಗ ಮುದ್ದಿಸುವ ಅಪ್ಪನೂ ಇಲ್ಲ. ಈ ಪ್ರಪಂಚದಲ್ಲಿ ಮನುಷ್ಯರೂ ಇರುತ್ತಾರೆ ಎಂದು ಮಗುವಿಗೆ ತಿಳಿದಂತಿಲ್ಲ. ಆ ಶವಗಳ ಮಧ್ಯೆ ಅನಾಥವಾಗಿ ಜೀವವಿದ್ದೂ ಶವದಂತೆ ಮಲಗಿತ್ತು ಮಗು. ಈ ಘಟನೆ ಉತ್ತರಾಖಂಡದ ಡೆಹ್ರಾಡೂನ್​ನಲ್ಲಿ ನಡೆದಿದೆ, ಖಾಸಿಫ್(25), ಅಮನ್(22) ವಿಷ ಸೇವಿಸಿ ಆತ್ಮಹತ್ಯ ಮಾಡಿಕೊಂಡಿದ್ದರು.

ಅಮನ್ ಗೃಹಿಣಿಯಾಗಿದ್ದು ಜೂನ್ 8ರಂದು ಮಗುವಿಗೆ ಜನ್ಮ ನೀಡಿದ್ದಳು. ಅದೇನಾಯಿತೋ ಏನೋ ಮಗುವನ್ನು ಅನಾಥ ಮಾಡಿ ಹೋಗಿದ್ದಾರೆ. ಶವಗಳ ಪಕ್ಕ ನೀರು ಹಾಗೂ ಹಳಸಿದ ಆಹಾರವಿತ್ತು. ಮಗು ಹಾಲಿಲ್ಲದೇ ನಿತ್ರಾಣವಾಗಿತ್ತು ಆದರೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ದಂಪತಿ ಉತ್ತರ ಪ್ರದೇಶದ ಸಹರಾನ್​ಪುರದವರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಒಂದು ತಿಂಗಳ ಹಿಂದಷ್ಟೇ ಡೆಹ್ರಾಡೂನ್​ಗೆ ಬಂದಿದ್ದರು. ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು, ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಳ್ಳಲು ಇದ್ದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ, ಖಾಸಿಪ್ ಕ್ರೇನ್ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದ, ಆರ್ಥಿಕ ಸಮಸ್ಯೆ ಇತ್ತು ಇದೇ ಸಾವಿಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

Latest Indian news

Popular Stories