Featured StoryCrime

ಕೂಟಿಯಾಲ ಹೊಳೆಯಲ್ಲಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ

ಪೊನ್ನಂಪೇಟೆ ತಾಲೂಕು ಹುದಿಕೇರಿ ಹೋಬಳಿಯ ಹೈಸೂಡ್ಳೂರು ಗ್ರಾಮದ ಐಗುಂದ ಬಳಿಯ ಕೂಟಿಯಾಲ ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ.

ಹುದಿಕೇರಿಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಶ್ವಿನಿ (48) ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳಾದ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ನಿಕಿತಾ (21) ಮತ್ತು ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದ ನವ್ಯಾ (18) ಈ ಮೂವರ ಮೃತ ದೇಹಗಳು ಇಂದು ಕೂಟಿಯಲ ಹೊಳೆಯಲ್ಲಿ ಕಂಡುಬಂದಿವೆ. ಮೂಲತಃ ಮಾದಾಪುರದವರಾದ ಅಶ್ವಿನಿ ಕಳೆದ ಆರು ವರ್ಷಗಳಿಂದ ಹುದಿಕೇರಿಯಲ್ಲಿ ಸೇವಾ ನಿರತ ಪ್ರತಿನಿಧಿಯಾಗಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಇವರು ಹೈಸೊಡ್ಲೂರು ಬಳಿಯ ಐಗುಂದದಲ್ಲಿ ಒಂದು ಎಕರೆ ಕಾಫಿ ತೋಟವನ್ನು ಹೊಂದಿದ್ದಾರೆ. ಶನಿವಾರ ಮಧ್ಯಾಹ್ನ ಸ್ಕೂಟರಿನಲ್ಲಿ ತೋಟಕ್ಕೆ ತೆರಳಿರುವುದನ್ನು ಕೆಲವರು ಕಂಡಿದ್ದಾರೆ. ಆದರೆ ಇಂದು ಮಧ್ಯಾಹ್ನದವರೆಗೆ ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಈ ಬಗ್ಗೆ ಪಕ್ಕದ ಮನೆಯವರು ಕೆಲವು ಸಾರ್ವಜನಿಕರಿಗೆ ವಿಚಾರ ತಿಳಿಸಿದ್ದರು. ಇಂದು ಸಂಜೆ ಕೂಟಿಯಾಲ ಹೊಳೆ ಸಮೀಪ ತೆರಳಿದ ಕೆಲವರಿಗೆ ಮೃತ ದೇಹಗಳು ಗೋಚರಿಸಿವೆ. ಇವರ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ಪೊಲೀಸರ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯಿಂದ ವಾಸ್ತವ ಕಾರಣ ತಿಳಿಯಬೇಕಾಗಿದೆ. ಅಶ್ವಿನಿಯ ಪತಿ ಮಂಡ್ಯ ಮೂಲದವರಾಗಿದ್ದು ಮೈಸೂರಿನ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕುಟುಂಬ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಾಗಿ ಆಕಸ್ಮಿಕವಾಗಿ ತೋಟದ ಬದಿಯ ಹೂಳೆಗೆ ಜಾರಿ ಬಿದ್ದಿರಬಹುದು ಎಂದು ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button