ಸರ್ಕಾರಕ್ಕೆ ಎನ್ ಸಿಪಿ ಬಣ ಪ್ರವೇಶದಿಂದ ಆತಂಕ; ಶಿವಸೇನೆ ಶಾಸಕರೊಂದಿಗೆ ಸಿಎಂ ಶಿಂಧೆ ಸಭೆ

ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಕ್ಷಿಪ್ರಕ್ರಾಂತಿಯಲ್ಲಿ ವಿಪಕ್ಷ ಎನ್ ಸಿಪಿಯ ಶಾಸಕರು ಅಜಿತ್ ಪವಾರ್ ನೇತೃತ್ವದಲ್ಲಿ ಬಿಜೆಪಿ ಶಿವಸೇನೆ ಸರ್ಕಾರವನ್ನು ಸೇರಿರುವುದು, ಶಿವಸೇನೆ ಶಾಸಕರಲ್ಲಿ ಆತಂಕ ಮೂಡಿಸಿದೆ.

ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದು ಅನರ್ಹತೆ ಭೀತಿ ಎದುರಿಸುತ್ತಿರುವ ಶಾಸಕರನ್ನು ಸಿಎಂ ಏಕನಾಥ್ ಶಿಂಧೆ ಭೇಟಿ ಮಾಡಿ ಆತಂಕ ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.

ಭಾನುವಾರದಂದು ಎನ್ ಸಿಪಿಯ 9 ಶಾಸಕರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
 
ಕಳೆದ ವರ್ಷ ಜೂನ್ ನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಎನ್ ಸಿಪಿ ಜೊತೆಗಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಶಿಂಧೆ ನೇತೃತ್ವದ ಶಾಸಕರು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಏಕನಾಥ್ ಶಿಂಧೆ ಮಹಾರಾಷ್ಟ್ರದ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಆಗ ಉದ್ಧವ್ ಠಾಕ್ರೆ ಸರ್ಕಾರದಲ್ಲಿ ಶಾಸಕರಿಗೆ ಸೂಕ್ತ ಅನುದಾನ ಸಿಗುತ್ತಿಲ್ಲ, ಎಂವಿಎ ಮೈತ್ರಿಕೂಟದಲ್ಲಿ ಡಿಸಿಎಂ ಆಗಿ ಹಣಕಾಸು ಖಾತೆಯನ್ನು ಹೊಂದಿದ್ದ ಅಜಿತ್ ಪವಾರ್ ಅವರು ತಮ್ಮ ಶಾಸಕರಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದಾರೆ ಎಂದು  ಶಿಂಧೆ ಬಣದ ಶಾಸಕರು ಆರೋಪಿಸಿದ್ದರು. ಈಗ ಅಂದು ಶಿವಸೇನೆ ಶಾಸಕರು ಯಾರನ್ನು ವಿರೋಧಿಸಿದ್ದರೋ ಈಗ ಅವರೇ ಬಿಜೆಪಿ-ಶಿವಸೇನೆ (ಶಿಂಧೆ ಬಣ) ಯ ಸರ್ಕಾರದೊಂದಿಗೆ ಕೈಜೋಡಿಸಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
 
ಪುಣೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶಿಂಧೆ ತಮ್ಮ ಬಣದ ಶಾಸಕರೊಂದಿಗೆ ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದು, ಪರಿಹಾರವನ್ನೂ ಕಂಡುಕೊಳ್ಳಲು ಯತ್ನಿಸಿದ್ದಾರೆ. 

ಎನ್ ಸಿಪಿ ಸರ್ಕಾರವನ್ನು ಸೇರಿರುವ ಹಿನ್ನೆಲೆಯಲ್ಲಿ ನಾವು ನಮ್ಮ ಆತಂಕಗಳನ್ನು ಸಿಎಂ ಶಿಂಧೆ ಅವರಿಗೆ ಹೇಳಿದ್ದೇವೆ, ಸರ್ಕಾರಕ್ಕೆ ಬೆಂಬಲ ನೀಡಿರುವ ಶಾಸಕರ ಹಿರಿತನವನ್ನು ಗಮನಿಸಿದರೆ ಪ್ರಮುಖ ಖಾತೆಗಳು ಅವರ ಪಾಲಾಗುವ ಸಾಧ್ಯತೆ ಇದೆ ಹಾಗೂ ಆ ಸಚಿವರು ಅವರ ಪಕ್ಷದ ಶಾಸಕರಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂಬುದು ನಮ್ಮ ಆತಂಕವಾಗಿದೆ ಎಂದು ಶಿವಸೇನೆ ಶಾಸಕರು ಹೇಳಿದ್ದಾರೆ.

ಇದೇ ಕಾರಣದಿಂದಾಗಿ ನಾವು ಉದ್ಧವ್ ಸರ್ಕಾರದ ವಿರುದ್ಧ ಬಂಡೆದ್ದು ಶಿಂಧೆ ಜೊತೆ ಸೇರಿ ಬಿಜೆಪಿಯನ್ನು ಬೆಂಬಲಿಸಿದ್ದೆವು, ಈಗ ಮತ್ತೆ ಅದೇ ಪುನರಾವರ್ತನೆಯಾದಲ್ಲಿ ನಾವು ಮರು ಆಯ್ಕೆಯಾಗುವುದೇ ಕಷ್ಟವಾಗಲಿದೆ ಎಂದು ಶಾಸಕರೊಬ್ಬರು ಹೇಳಿದ್ದಾರೆ. 

Latest Indian news

Popular Stories