ಮುಂಬೈ: ಶಿವಸೇನೆ ಸಂಸ್ಥಾಪನಾ ದಿನದಂದು ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಮುಂಬೈನ ಎರಡು ಭಾಗಗಳಲ್ಲಿ ಸಮಾನಾಂತರ ಕಾರ್ಯಕ್ರಮಗಳನ್ನು ನಡೆಸಿದ್ದರಿಂದ ಶಿವಸೇನೆ ವರ್ಸಸ್ ಶಿವಸೇನೆ ಕದನಕ್ಕೆ ಸಾಕ್ಷಿಯಾಗಿದೆ. ಸಿಯಾನ್ ನ ಷಣ್ಮುಖಾನಂದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
“ಮೋದಿ-ಜಿ ನಾನು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಲು ನಿಮ್ಮನ್ನು ಆಹ್ವಾನಿಸುತ್ತೇನೆ… ಅದು ನಿಮ್ಮ ಮತ್ತು ನನ್ನ ವಿರುದ್ಧ ನಡೆಯಲಿದೆ” ಎಂದು ಅವರು ಹೇಳಿದರು. ಇನ್ನು ಕೆಲವೇ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
“ಬಿಜೆಪಿಗೆ ನನ್ನ ಸಂದೇಶವಿದು, ನನ್ನ ಮೂಲ ಚಿಹ್ನೆಯನ್ನು ಬಳಸದೆ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಿ. ನಾವು ಎಂದಿಗೂ ಬೇರೆಯವರ ಚಿತ್ರಗಳನ್ನು ಬಳಸಿಲ್ಲ ಎಂದು ನಾನು ಹೆಮ್ಮೆಪಡುತ್ತೇನೆ. ವಿಶೇಷವಾಗಿ ಪ್ರಧಾನಿ ಮೋದಿಯವರ ಫೋಟೊಗಳನ್ನು ಬಳಸುವುದಿಲ್ಲ. ನಾನು ಪ್ರಧಾನಿ ಮೋದಿಯವರಿಗೆ ಇಂದಿನಿಂದಲೇ ಸಿದ್ಧತೆಗಳನ್ನು ಪ್ರಾರಂಭಿಸಲು ಸವಾಲು ಹಾಕುತ್ತೇನೆ, ಈ ನಕಲಿ ಶಿವಸೇನೆಯನ್ನು ದೂರವಿಡುತ್ತಿದೆ ಎಂದು ಅವರು ಹೇಳಿದರು.ಠಾಕ್ರೆ ಅವರು ಎರಡು ಸೇನಾ ಬಣಗಳು ಕೈಜೋಡಿಸುವ ಮತ್ತು ಎನ್‌ಡಿಎ ಬಣದಲ್ಲಿ ಉಳಿಯುವ ಬಗೆಗಿನ ಊಹಾಪೋಹಗಳನ್ನು ತಳ್ಳಿಹಾಕಿದರು. ಅವರು ತಮ್ಮ ಪಕ್ಷವನ್ನು ಮುಗಿಸಿಲು ಪ್ರಯತ್ನಿಸುವವರ ಜೊತೆ ಎಂದಿಗೂ ಹೋಗುವುದಿಲ್ಲ ಎಂದು ಠಾಕ್ರೆ ಹೇಳಿದರು.
ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಬಣಕ್ಕೆ ಚುನಾವಣಾ ಆಯೋಗವು ಅವಿಭಜಿತ ಶಿವಸೇನೆಯ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ನೀಡಿದೆ. ಆದರೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಶಿಂಧೆ ಬಣ ಹಿನ್ನಡೆ ಸಾಧಿಸಿದೆ. ಉದ್ಧವ್ ಠಾಕ್ರೆ ಬಣವು 9 ಸ್ಥಾನಗಳನ್ನು ಗೆದ್ದರೆ, ಶಿಂಧೆ ಬಣವು 7 ಸ್ಥಾನಗಳನ್ನು ಗೆದ್ದುಕೊಂಡಿತ್ತು.