
ವಿದ್ಯುತ್ ತಿದ್ದುಪಡಿ ಮಸೂದೆ: ಖಾಸಗಿಯವರಿಗೆ ಸ್ವಾತಂತ್ರ್ಯ ನೀಡಿ ಮತ್ತಷ್ಟು ಸಮಸ್ಯೆ ಸೃಷ್ಟಿಸಲು ಹೊರಟಿದೆಯೇ ಕೇಂದ್ರ ಸರ್ಕಾರ?!
ನವದೆಹಲಿ: ವಿದ್ಯುತ್ ತಿದ್ದುಪಡಿ ಮಸೂದೆಗೆ ಈಗಾಗಲೇ ರಾಜ್ಯ ಸರಕಾರಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ. ಈ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ರಾಜ್ಯದ ಅಧೀನದಲ್ಲಿರುವ ಸರಕಾರಿ ವಿದ್ಯುತ್ ಕಂಪೆನಿಗಳು ನಷ್ಟಕ್ಕೊಳಗಾಗುವುದರೊಂದಿಗೆ ಗ್ರಾಮೀಣ ಪ್ರದೇಶದ ಜನ ಸಂಕಷ್ಟಕ್ಕೊಳಗಾಗಲಿದ್ದಾರೆ. ಈ ಮಸೂದೆಯು ನೇರವಾಗಿ ಸರಕಾರಿ ಸೌಮ್ಯದ ವಿದ್ಯುತ್ ಸಂಸ್ಥೆಗಳೊಂದಿಗೆ ಖಾಸಗಿ ಸಂಸ್ಥೆಗಳು ಸ್ಪರ್ಧೆಗಿಳಿಯುವಂತೆ ಮಾಡುತ್ತದೆ.
ಈ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತು, ಕಾಯ್ದೆಯ ಸ್ವರೂಪ ದೊರೆತರೆ ಗ್ರಾಹಕರು ತಮಗೆ ಬೇಕಾದ ವಿತರಣಾ ಕಂಪನಿಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವ ಸ್ವಾತಂತ್ರ್ಯ ಲಭಿಸುತ್ತದೆ. ಗ್ರಾಹಕರಿಗೆ ಇಂಥ ಆಯ್ಕೆ ಸಿಗುವಂತೆ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು.
ದೆಹಲಿ, ಮುಂಬೈ ಮತ್ತು ಅಹಮದಾಬಾದ್ನಂಥ ನಗರಗಳನ್ನು ಹೊರತು ಪಡಿಸಿ ಮತ್ತೆಲ್ಲ ಕಡೆಗಳಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತದೆ. ಇದೀಗ ಖಾಸಗಿ ಸಂಸ್ಥೆಗಳಿಗೆ ಇಲ್ಲೂ ಅವಕಾಶ ನೀಡಿದರೆ ಲಾಭ ಇರುವಲ್ಲಿ ವಿದ್ಯುತ್ ಪೂರೈಸಿ ನಷ್ಟವಿರುವಲ್ಲಿ ಸರಕಾರಿ ಕಂಪೆನಿಗಳು ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯ ಉಂಟಾಗುತ್ತದೆ.
ಬಹುತೇಕ ವಿದ್ಯುತ್ ವಿತರಣಾ ಕಂಪನಿಗಳು ಈಗಾಗಲೇ ನಷ್ಟ ಮತ್ತು ಸಾಲದ ಕೂಪದಲ್ಲಿ ಸಿಲುಕಿವೆ. ವಿತರಣಾ ಕಂಪನಿಗಳನ್ನು ನಷ್ಟದಿಂದ ಹೊರತರಲು, ನಷ್ಟದ ಪ್ರಮಾಣ ಕಡಿಮೆ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿತ್ತು. ಆದರೆ ಇವು ತಾತ್ಕಾಲಿಕವಾಗಿ ವಿತರಣಾ ಕಂಪನಿಗಳಿಗೆ ತುಸು ಹಣದ ಸಹಾಯ ಒದಗಿಸಿದವು ಎಂಬುದನ್ನು ಹೊರತುಪಡಿಸಿದರೆ, ಹೆಚ್ಚಿನ ಸಾಧನೆಯೇನೂ ಸಾಧ್ಯವಾಗಲಿಲ್ಲ.
ವಿದ್ಯುತ್ ವಿತರಣೆಗೆ ಖಾಸಗಿ ಕಂಪನಿಗಳ ಮುಕ್ತಪ್ರವೇಶಕ್ಕೆ ಅವಕಾಶ ಮಾಡಿಕೊಡುವುದು ಸರ್ಕಾರಿ ಸ್ವಾಮ್ಯದ ವಿತರಣಾ ಕಂಪನಿಗಳ ನಷ್ಟದ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ ಎಂಬುದು ರಾಜ್ಯ ಸರ್ಕಾರಗಳ ಆಕ್ಷೇಪವಾಗಿದೆ. ಲಾಭ ತಂದುಕೊಡುವ ವಾಣಿಜ್ಯ ಮತ್ತು ಕೈಗಾರಿಕಾ ಸಂಪರ್ಕಗಳತ್ತ ಮಾತ್ರ ಖಾಸಗಿ ಕಂಪನಿಗಳು ಗಮನಹರಿಸುತ್ತವೆ. ಹೆಚ್ಚಿನ ಜವಾಬ್ದಾರಿ, ಬಾಧ್ಯತೆ ಮತ್ತು ನಷ್ಟಕ್ಕೆ ಕಾರಣವಾಗುವ ಗ್ರಾಮೀಣ ಗೃಹ ಸಂಪರ್ಕಗಳನ್ನು ಕಡೆಗಳಿಸುತ್ತವೆ. ಅದು ಕೊನೆಗೆ ರಾಜ್ಯ ಸರ್ಕಾರಗಳ ಬಾಧ್ಯತೆಯಾಗಿಯೇ ಉಳಿಯುತ್ತದೆ ಎಂದು ರಾಜ್ಯ ಸರ್ಕಾರಗಳು ಹೇಳಿವೆ.
ಈ ಕುರಿತು ಮಮತಾ ಬ್ಯಾನರ್ಜಿಯವರು ಕೂಡ ಕೇಂದ್ರ ಸರಕಾರಕ್ಕೆ ಈಗಾಗಲೇ ಪತ್ರ ಬರೆದು ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ನವೀಕರಿಸಬಹುದಾದ ಇಂಧನ ಖರೀದಿ ಬಾಧ್ಯತೆಗಳನ್ನು (Renewable energy Purchase Obligations – RPOs) ಈಡೇರಿಸದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸುವ ಕುರಿತು ಕೂಡ ಹಲವು ರಾಜ್ಯಗಳು ಆಕ್ಷೇಪಿಸಿವೆ. ಇದರ ಜೊತೆಗೆ ಪ್ರಾದೇಶಿಕ ಲೋಡ್ ಡಿಸ್ಪ್ಯಾಚ್, ಸ್ಟೇಟ್ ಲೋಡ್ ಡಿಸ್ಪ್ಯಾಚ್ ಕೇಂದ್ರಗಳು ರಾಷ್ಟ್ರೀಯ ಲೋಡ್ ಡಿಸ್ಪ್ಯಾಚ್ ಕೇಂದ್ರಗಳ ಸೂಚನೆಯನ್ನು ಪಾಲಿಸಬೇಕು ಎಂಬ ಬಗ್ಗೆಯೂ ಆಕ್ಷೇಪಗಳು ಕೇಳಿಬಂದಿವೆ.
ಈ ನಿಯಮಗಳು ಯಥಾವತ್ತಾಗಿ ಜಾರಿಯಾದರೆ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಬರಲಿದ್ದು, ರಾಜ್ಯಗಳು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುತ್ತವೆ ಎಂದು ಮಮತಾ ಬ್ಯಾನರ್ಜಿ ತಮ್ಮ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.




