‘ಹಸಿವು ಮುಕ್ತ ಕರ್ನಾಟಕ ಸರ್ಕಾರದ ಗುರಿ, ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ’: ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

ಬೆಂಗಳೂರು: ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿಧಾನ ಮಂಡಲ ಜಂಟಿ ಅಧಿವೇಶನ ಇಂದು ಜುಲೈ 3ರಂದು ಆರಂಭವಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದಾರೆ.

ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಲಿದ್ದಾರೆ. ಒಟ್ಟು 10 ದಿನಗಳ ಕಾಲ ವಿಧಾನಮಂಡಲ ಜಂಟಿ ಬಜೆಟ್ ಅಧಿವೇಶನ ನಡೆಯಲಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ವಿಷಯ ಪ್ರಸ್ತಾಪವಾಗಲಿದೆ.

ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. ಬಸವಣ್ಣನ ತತ್ವದಡಿ ರಾಜ್ಯ ಸರ್ಕಾರ ನಡೆಯುತ್ತಿದೆ. ಸರ್ಕಾರ ಎಲ್ಲಾ ಸಮುದಾಯಗಳ ಪರವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕುವೆಂಪು ಅವರ ಸರ್ವಜನಾಂಗದ ಶಾಂತಿ ತೋಟ ತತ್ವದಡಿ ಕೆಲಸ ಮಾಡುತ್ತಿದ್ದೇವೆ. ಬಸವಣ್ಣ, ಸರ್ವಜ್ಞ ಸೇರಿ ಅನೇಕ ಸಂತರು ಶಾಂತಿ ತತ್ವ ಪಾಲನೆ ಮಾಡಲಾಗುತ್ತಿದೆ ಎಂದರು.

ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಹಸಿವು ಮುಕ್ತ ಕರ್ನಾಟಕ ರಾಜ್ಯ ಸ್ಥಾಪನೆಗೆ ಮಾಡಲಿದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು ಮುಂತಾದವರ ಹಸಿವು ತಣಿಸಲು ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಹಣ ನೀಡಲು ಮುಂದಾಗಿದೆ. 

ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್​ವರೆಗೆ ಉಚಿತ ವಿದ್ಯುತ್​ ಕೊಡಲಾಗುತ್ತದೆ. ಈ ಯೋಜನೆಯಿಂದ ಸುಮಾರು 2.14 ಕೋಟಿ ಕುಟುಂಬಕ್ಕೆ ಅನುಕೂಲ ಆಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಹಾಕಲಾಗುತ್ತದೆ. ನನ್ನ ಸರ್ಕಾರ ಆಡಳಿತವನ್ನು ಪವಿತ್ರ ಕರ್ತವ್ಯ ಎಂದು ಪರಿಗಣಿಸುತ್ತದೆ. ಸರ್ಕಾರ ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ ಎಂದರು.

ವಿಧಾನಸೌಧ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ: ಇಂದಿನಿಂದ 10 ದಿನ ವಿಧಾನಮಂಡಲ​​​ ಅಧಿವೇಶನ ಹಿನ್ನೆಲೆ ವಿಧಾನಸೌಧ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ. 2 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿಭಟನೆ, ಧರಣಿ ನಡೆಸುವಂತಿಲ್ಲ. ವಿಧಾನಸೌಧದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ‌ ಶ್ರೀನಿವಾಸಗೌಡ ನೇತೃತ್ವದಲ್ಲಿ ಮೂವರು ಡಿಸಿಪಿ, 15 ಎಸಿಪಿ, 80 ಇನ್ಸ್​ಪೆಕ್ಟರ್​ಗಳು ಸೇರಿದಂತೆ ವಿಧಾನಸೌಧ ಸುತ್ತಮುತ್ತ 1500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ವಿರೋಧ ಪಕ್ಷದ ನಾಯಕರ ಅನುಪಸ್ಥಿತಿ: ಕರ್ನಾಟಕ ವಿಧಾನ ಮಂಡಲ ಅಧಿವೇಶನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನ ಸಭೆ ಪ್ರತಿಪಕ್ಷ ನಾಯಕನಿಲ್ಲದೆ ಕಲಾಪ ನಡೆಯುತ್ತಿದೆ. ಪ್ರಮುಖ ವಿರೋಧ ಪಕ್ಷ ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಯಲ್ಲಿ ಹೈಕಮಾಂಡ್ ಮತ್ತು ರಾಜ್ಯ ಬಿಜೆಪಿ ಇನ್ನೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ವಿಪಕ್ಷ ನಾಯಕನ ಆಯ್ಕೆಗೆ ದೆಹಲಿ ಬಿಜೆಪಿಯಿಂದ ವೀಕ್ಷಕನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.

Latest Indian news

Popular Stories