ಮಾಂಡವಿ(ಗುಜರಾತ್): ಗುಜರಾತಿನ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ‘ಬಿಪರ್ಜೋಯ್’ ಚಂಡಮಾರುತವು ಅಪ್ಪಳಿಸುವ ಸಾಧ್ಯತೆಯಿದೆ. ಮುನ್ನೆಚ್ಚರಿಕ ಕ್ರಮವಾಗಿ ಕರಾವಳಿಯ ಸಮೀಪ ನೆಲೆಸಿರುವ 74,000ಕ್ಕೂ ಹೆಚ್ಚು ಜನರನ್ನು ಜಿಲ್ಲಾಡಳಿತ ಸ್ಥಳಾಂತರಿಸಿದೆ. ಅಲ್ಲದೆ ರಕ್ಷಣಾ ಮತ್ತು ಪರಿಹಾರ ಕ್ರಮಗಳಿಗಾಗಿ ವಿಪತ್ತು ನಿರ್ವಹಣಾ ಘಟಕಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಚಂಡಮಾರುತವು ಗುಜರಾತ್ ಕರಾವಳಿಗೆ ಅಪ್ಪಳಿಸುತ್ತಿದ್ದು, ಸೌರಾಷ್ಟ್ರ-ಕಚ್ ಪ್ರದೇಶದ ಕೆಲವು ಭಾಗಗಳಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 2021ರ ಮೇನಲ್ಲಿ ‘ಟೌಕ್ಟೇ’ ಚಂಡಮಾರುತ ನಂತರ ಎರಡು ವರ್ಷಗಳಲ್ಲಿ ರಾಜ್ಯಕ್ಕೆ ಅಪ್ಪಳಿಸುವ ಎರಡನೇ ಚಂಡಮಾರುತ ಇದಾಗಿದೆ.
ಭಾರತೀಯ ಹವಾಮಾನ ಇಲಾಖೆ(IMD) ಪ್ರಕಾರ, ಈ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಮತ್ತು ಭೂಕುಸಿತ ಉಂಟಾಗಲಿದ್ದು, ‘ಅತ್ಯಂತ ವೇಗವಾಗಿ ಅಂದರೆ ಗರಿಷ್ಠ ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಎಂಟು ಕರಾವಳಿ ಜಿಲ್ಲೆಗಳಲ್ಲಿ ಒಟ್ಟು 74,345 ಜನರನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 34,300 ಜನರನ್ನು ಕಚ್ ಜಿಲ್ಲೆಯಲ್ಲಿ ಮಾತ್ರ ಸ್ಥಳಾಂತರಿಸಲಾಗಿದೆ. ನಂತರ ಜಾಮ್ನಗರದಲ್ಲಿ 10,000, ಮೊರ್ಬಿಯಲ್ಲಿ 9,243, ರಾಜ್‌ಕೋಟ್‌ನಲ್ಲಿ 6,089 ಗಿರ್ ಸೋಮನಾಥ್ ಜಿಲ್ಲೆಯಲ್ಲಿ 1,605 ಎಂದು ಗುಜರಾತ್ ಸರ್ಕಾರದ ಪ್ರಕಟಣೆ ತಿಳಿಸಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಬುಧವಾರ ರಾತ್ರಿ ಗಾಂಧಿನಗರದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ (ಎಸ್‌ಇಒಸಿ) ತಲುಪಿದ್ದು ಪರಿಸ್ಥಿತಿ ಮತ್ತು ಸಮೀಪಿಸುತ್ತಿರುವ ಚಂಡಮಾರುತದ ದೃಷ್ಟಿಯಿಂದ ಆಡಳಿತವು ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸಲು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಏತನ್ಮಧ್ಯೆ, ಗುಜರಾತ್‌ನ ಎರಡು ಪ್ರಸಿದ್ಧ ದೇವಾಲಯಗಳಾದ ದೇವಭೂಮಿ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಾಲಯ ಮತ್ತು ಗಿರ್ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯವನ್ನು ಗುರುವಾರ ಭಕ್ತರಿಗಾಗಿ ಮುಚ್ಚಲಾಗುವುದು ಎಂದು ಮತ್ತೊಂದು ಪ್ರಕಟಣೆ ತಿಳಿಸಿದೆ.
ಈ ಅವಧಿಯಲ್ಲಿ ದೇವಭೂಮಿ ದ್ವಾರಕಾ ಜಿಲ್ಲೆಯ ಖಂಬಲಿಯಾ ತಾಲೂಕಿನಲ್ಲಿ ಅತಿ ಹೆಚ್ಚು 121 ಮಿಮೀ ಮಳೆಯಾಗಿದೆ. ನಂತರದ ಸ್ಥಾನದಲ್ಲಿ ದ್ವಾರಕಾ (92 ಮಿಮೀ) ಮತ್ತು ಕಲ್ಯಾಣಪುರ (70 ಮಿಮೀ) ಮಳೆಯಾಗಿದೆ.
ಸರ್ಕಾರದ ಪ್ರಕಾರ, ಎನ್‌ಡಿಆರ್‌ಎಫ್‌ನ 15 ತಂಡಗಳು (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), 12 ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ), ರಾಜ್ಯ ರಸ್ತೆ ಮತ್ತು ಕಟ್ಟಡ ಇಲಾಖೆಯ 115 ತಂಡಗಳು ಮತ್ತು ರಾಜ್ಯ ವಿದ್ಯುತ್ ಇಲಾಖೆಯ 397 ತಂಡಗಳನ್ನು ಕರಾವಳಿಯ ವಿವಿಧ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.