ಹಾಸನ ಪೆನ್‌ಡ್ರೈವ್ ಪ್ರಕರಣ| ಅಶ್ಲೀಲ ವಿಡಿಯೋ ಮಾರ್ಫ್ ಮಾಡಿದ ಆರೋಪ: ಸೈಬರ್ ಕ್ರೈಂ ಠಾಣೆಗೆ ದೂರು

ಕರ್ನಾಟಕದ ಹಾಸನ ಜಿಲ್ಲೆಯ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಚುನಾವಣಾ ಏಜೆಂಟ್‌ಗಳು ಸಂಸದರ ಕೆಲವು ಮಾರ್ಫ್‌ ಮಾಡಿದ ಅಶ್ಲೀಲ ವಿಡಿಯೋಗಳು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿವೆ ಎಂದು ದೂರು ದಾಖಲಿಸಿದ್ದಾರೆ.

ಜೆಡಿಎಸ್ ಮತ್ತು ಬಿಜೆಪಿಯ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಅವರು ಮಂಗಳವಾರ ದೂರು ದಾಖಲಿಸಿದ್ದಾರೆ. ನವೀನ್ ಗೌಡ ಮತ್ತು ಇತರರು ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ ಎಂದು ದೂರಿನಲ್ಲಿ ತೇಜಸ್ವಿ ಆರೋಪಿಸಿದ್ದಾರೆ.

“ನವೀನ್ ಗೌಡ ಮತ್ತು ಇತರರು ವಿಡಿಯೋ ಮತ್ತು ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಹಾಸನ ಲೋಕಸಭಾ ಕ್ಷೇತ್ರದ ಮತದಾರರಿಗೆ ಪೆನ್ ಡ್ರೈವ್, ಸಿಡಿ ಮತ್ತು ವಾಟ್ಸಾಪ್ ಮೂಲಕ ಹರಿಬಿಟ್ಟು ಪ್ರಜ್ವಲ್ ರೇವಣ್ಣ ಅವರನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಅವರಿಗೆ ಮತ ನೀಡಬೇಡಿ ಎಂದು ಹೇಳುತ್ತಿದ್ದಾರೆ” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕ್ಷೇತ್ರದಲ್ಲಿ ಏ. 26 ರಂದು ಮತದಾನ ನಡೆಯಲಿದೆ. ಪ್ರಜ್ವಲ್ ರೇವಣ್ಣ ಅವರಿಗೆ ಮತಹಾಕದಂತೆ ಜನರ ದಿಕ್ಕು ತಪ್ಪಿಸಲು ಅರೇಹಳ್ಳಿ ಹೋಬಳಿ ನಲ್ಕೆ ಗ್ರಾಮದ ನವೀನ್ ಗೌಡ ಹಾಗೂ ಇತರರು ಪ್ರಜ್ವಲ್ ರೇವಣ್ಣ ಅವರ ಮಾರ್ಫ್ ಮಾಡಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮಾತನಾಡಿ, “ತಮ್ಮ ವಿರುದ್ಧ ಪೆನ್‌ಡ್ರೈನ್ ಹಂಚಿಕೆ ಮಾಡಿ ತೇಜೋವಧೆ ಮಾಡಲಾಗಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಈ ದೃಶ್ಯಗಳನ್ನು ರೆಕಾರ್ಡ್ ಮಾಡಿದವರು ಯಾರು ಮತ್ತು ಪೆನ್‌ಡ್ರೈವ್ ಹಂಚುತ್ತಿರುವವರು ಯಾರು ಎಂಬುವುದು ತಿಳಿದಿಲ್ಲ. ಆದರೆ ಪೊಲೀಸರು ಕಾನೂನು ಪ್ರಕಾರವಾಗಿ ತನಿಖೆ ನಡೆಸಲಿದ್ದಾರೆ” ಎಂದು ತಿಳಿಸಿದರು.

ಇನ್ನು “ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಪೆನ್‌ ಡ್ರೈವ್ ಹಂಚಿಕೆ ಬಗ್ಗೆ ಸಮಗ್ರವಾದ ತನಿಖೆಯಾಗಬೇಕು” ಎಂದು ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ತಾಯಿ ಅನುಪಮಾ ಮಹೇಶ್ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.

“ಪೆನ್‌ಡ್ರೈವ್ ಹಂಚಿಕೆಯಲ್ಲಿ ಕಾಂಗ್ರೆಸ್ ಪಿತೂರಿಯಿದೆ ಎಂದು ವಕೀಲ ಜಿ ದೇವರಾಜೇಗೌಡ ಅವರು ಆರೋಪಿಸಿದ್ದಾರೆ. ಆದರೆ ಅವರೇ ಈ ಹಿಂದೆ ತಮ್ಮ ಬಳಿ ಪೆನ್‌ಡ್ರೈವ್ ಇದೆ, ಅದನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಈಗ ಅವರೇ ಯಾಕೆ ಈ ಕೆಲಸ ಮಾಡಿರಬಾರದು” ಎಂದು ಅನುಮಾನ ವ್ಯಕ್ತಪಡಿಸಿದರು.

ರೇವಣ್ಣ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಮತ್ತು ಹೊಳೆನರಸೀಪುರ ಶಾಸಕ ಹಾಗೂ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಪುತ್ರ. ಪ್ರಜ್ವಲ್ ರೇವಣ್ಣ ಎರಡನೇ ಬಾರಿಗೆ ಈ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಿ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಎಂ ಪಟೇಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಪುಟ್ಟಸ್ವಾಮಿಗೌಡ ಅವರು 1999ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ದೇವೇಗೌಡರನ್ನು ಸೋಲಿಸಿದ್ದರು.

Latest Indian news

Popular Stories