ಹಾವೇರಿ: ಊರಿಗೆ ತೆರಳಲು ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಹರಿದು ಇಬ್ಬರು ಭೀಕರವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ಬಳಿ ಇರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಮೃತರನ್ನು ವಿರುಪಾಕ್ಷಪ್ಪ ಕಾಳಿ (60) ಮತ್ತು ಚಿದಾನಂದ ಕುರುಬರ (53) ಎಂದು ಗುರುತಿಸಲಾಗಿದೆ. ಇಬ್ಬರೂ ನೀರಲಗಿ ಗ್ರಾಮದಿಂದ ಶಿಗ್ಗಾಂವಿ ಪಟ್ಟಣಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದರು. ಆಗ ವೇಗವಾಗಿ ಬಂದ ಕಾರು ಇಬ್ಬರ ಮೇಲೆ ಹರಿದು ದುರ್ಘಟನೆ ಸಂಭವಿಸಿದೆ.
ವಿರುಪಾಕ್ಷಪ್ಪ ಕಾಳಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಗಂಭೀರವಾಗಿ ಗಾಯಗೊಂಡಿದ್ದ ಚಿದಾನಂದ ಕುರುಬರ ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದ ಕಾರಣ ಮೃತಪಟ್ಟಿದ್ದಾರೆ.
ಅಪಘಾತದ ನಂತರ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಬಾರದ್ದರಿಂದ ಆಕ್ರೋಶಗೊಂಡ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬಳಿಕ ಅಪಘಾತ ಸಂಭವಿಸಿದ ಕಾರು ಬೆಳಗಾವಿ ಮೂಲದ್ದು ಎಂದು ಗೊತ್ತಾಗಿದ್ದು, ಚಾಲಕನನ್ನ ಅರ್ಧ ಗಂಟೆಯಲ್ಲಿ ಶಿಗ್ಗಾಂವಿ ಪೋಲಿಸ್ ಪಡೆ ಬಂಧಿಸಿದ್ದಾರೆ.