ಏಕಾಂಗಿಯಾಗಿ ಬೈಕ್’ನಲ್ಲಿ ದೇಶ ಸುತ್ತುತ್ತಿದ್ದಾರೆ ಹಿಜಾಬಿ ಗರ್ಲ್ ರೇಷ್ಮಾ!

‘ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು ಮತ್ತವರು ಬದುಕಿನಲ್ಲಿ ಒಮ್ಮೆಯಾದರೂ ಬೈಕ್ ಪ್ರಯಾಣಕ್ಕೆ ತೆರೆದುಕೊಳ್ಳಬೇಕು. ಆಗ ಅವರ ಜೀವನದೃಷ್ಟಿಯೇ ಬದಲಾಗುತ್ತದೆ’ ಎನ್ನುತ್ತಾರೆ ಚೆನ್ನೈ ಮೂಲದ ಬೈಕ್​ ರೈಡರ್ ರೇಷ್ಮಾ ಕಾಸೀಮ್ ನೂರ್​ (Reshma Kasim Noor). ಕ್ಲಾಸಿಕ್​ 350 ಬೈಕ್​ನಲ್ಲಿ ಸತತ 7 ತಿಂಗಳುಗಳ ಕಾಲ ಭಾರತದಾದ್ಯಂತ ಪ್ರಯಾಣಿಸಿದ ಸೋಲೋ ಬೈಕ್​ರೈಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ಇನ್​ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ತಮ್ಮನ್ನು ಅಲೆಮಾರಿ ಹಿಜಾಬ್​ ರೈಡರ್​ ಎಂದು ಪರಿಚಯಿಸಿಕೊಂಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಪುಣೆ, ದಮನ್-ದಿಯೂ, ಗುಜರಾತ್, ಬಿಹಾರ್, ದೆಹಲಿ, ಉತ್ತರ ಪ್ರದೇಶ ಮತ್ತು ನೇಪಾಳದಾದ್ಯಂತ ಬೈಕ್​ ಪ್ರಯಾಣ ಮಾಡಿದ್ದಾರೆ.

‘ಪ್ರಯಾಣದ ಸಮಯದಲ್ಲಿ ಟೆಂಟ್​, ಗುರುದ್ವಾರ, ಕೆಲವೊಮ್ಮೆ ಪೆಟ್ರೋಲ್​ ಬಂಕ್ ಹೀಗೆ ಮುಂತಾದ ಸ್ಥಳಗಳಲ್ಲಿ ತಂಗುತ್ತೇನೆ. ಭೇಟಿಯಾಗುವ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯತೆಯ ಬಗ್ಗೆ ಅರಿವು ಮೂಡಿಸುತ್ತೇನೆ. ಅವರಿಗೆಲ್ಲ ನಿಮ್ಮ ಬದುಕಿನಲ್ಲಿ ಒಮ್ಮೆಯಾದರೂ ಪ್ರಯಾಣಿಸಿ. ನಿಮ್ಮ ವ್ಯಕ್ತಿತ್ವವೇ ಬದಲಾಗುತ್ತದೆ ಎಂದು ಸಲಹೆ ನೀಡುತ್ತೇನೆ. ‘ಎನ್ನುತ್ತಾರೆ ರೇಷ್ಮಾ.

ಬೈಕ್​ ಪ್ರಯಾಣ ಮಾಡುವ ಮಹಿಳೆಯರಿಗೆ, ‘ಆರ್ಥಿಕವಾಗಿ ಸ್ವಾವಲಂಬಿಯಾದಲ್ಲಿ ಬದುಕಿನ  ಬಗ್ಗೆ ನಿಮ್ಮ ದೃಷ್ಟಿಕೋನವೇ ಬದಲಾಗುತ್ತದೆ. ಇನ್ನು ಪ್ರಯಾಣದ ವಿಷಯವಾಗಿ, ನಿಮ್ಮ ಅಂತಃಪ್ರಜ್ಞೆ ಏನು ಹೇಳುತ್ತದೆಯೋ ಅದನ್ನು ಕೇಳಿ. ಈ ಜಾಗ ಸುರಕ್ಷಿತವಲ್ಲ ಎನ್ನಿಸಿದರೆ ಅಲ್ಲಿರುವ ಮನುಷ್ಯರೊಂದಿಗೆ ಕೂಡ ಮಾತನಾಡಬೇಡಿ ಮತ್ತು ಆ ದಾರಿಯಲ್ಲಿ ಸಾಗಬೇಡಿ. ನಾನಂತೂ ಅವಶ್ಯಕತೆಯ ಹೊರತಾಗಿ ಮಧ್ಯರಾತ್ರಿ ಮತ್ತು ಸಂಜೆಯ 5ರ ನಂತರ ಪ್ರಯಾಣಿಸುವುದಿಲ್ಲ.’ ಎನ್ನುತ್ತಾರೆ ರೇಷ್ಮಾ.

Latest Indian news

Popular Stories