ಹೂಡೆ ಮತ್ತು ಸುತ್ತಮುತ್ತಲಿನ ಪ್ರದೇಶದ ನೆಟ್ವರ್ಕ್ ಸಮಸ್ಯೆ: ಗ್ರಾಮಸ್ಥರ ಸಭೆ ಸಫಲ | ತಕ್ಷಣ ದೊರೆತ ತಾತ್ಕಾಲಿಕ ಪರಿಹಾರ, ಶಾಶ್ವತ ಪರಿಹಾರಕ್ಕೆ ನಿರ್ಣಯ!

ಕಳೆದ ಕೆಲವು ತಿಂಗಳಿಂದ ಪಡುತೋನ್ಸೆ ಗ್ರಾಮದ ಅನೇಕ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಅನುಭವಿಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮದ ನಾಗರಿಕರು ಒಂದುಗೂಡಿ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಹಕಾರದೊಂದಿಗೆ ಕೆಮ್ಮಣ್ಣು ಪಂಚಾಯತ್ ಸಭಾಂಗಣದಲ್ಲಿ ಸಭೆ ಆಯೋಜಿಸಿದ್ದರು.

ಸಭೆಯಲ್ಲಿ ಒಂದು ತಾತ್ಕಾಲಿಕ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ನೆಟ್ವರ್ಕ್ ಸಮಸ್ಯೆಯ ಪರಿಹಾರದ ಸಾಧ್ಯತೆ ಮತ್ತು ಮಾರ್ಗೋಪಾಯಗಳ ಕುರಿತು ವಿಚಾರ ವಿನಿಮಯ ನಡೆಸಿದರು.

ಸಭೆಯಲ್ಲಿ ಬಂದ ಅಭಿಪ್ರಾಯದಂತೆ ಈಗ ಟವರ್ ಇರುವ ಸ್ಥಳದ ಮಾಲಿಕರನ್ನು ಸಂಪರ್ಕಿಸಿ ತಾತ್ಕಾಲಿಕವಾಗಿ ಮೊಬೈಲ್ ಸಂಪರ್ಕ ಸರಿಪಡಿಸಿ ಸ್ಥಳೀಯರ ಸಮಸ್ಯೆ ನಿವಾರಿಸಲು ಸಹಕರಿಸಲು ವಿನಂತಿಸಲಾಯಿತು. ಮೊದಲು ಈ ಬೇಡಿಕೆಯನ್ನು ನಿರಾಕರಿಸಿದ ಅವರು ಒತ್ತಾಯ ಮಾಡಿದ ನಂತರ ಮುಂದಿನ ಕೆಲವು ತಿಂಗಳ ವರೆಗೆ ಮೊಬೈಲ್ ಟವರ್ ಕಾರ್ಯಚರಿಸಲು ಅವಕಾಶ ಮಾಡಿಕೊಡಲು ಒಪ್ಪಿಕೊಂಡರು. ಆದರೆ ಮುಂದಿನ ದಿನಗಳಲ್ಲಿ ಅವರ ಜಮೀನಿನಿಂದ ಮೊಬೈಲ್ ಟವರ್‌ ಕಾರ್ಯಚರಣೆ ನಿಲ್ಲಿಸಿ ಅದನ್ನು ಕಳಚಿ ಕೊಂಡೊಯ್ಯುವ ಜವಾಬ್ದಾರಿ ಸಮಿತಿ, ಪಂಚಾಯತ್ ಸಹಕಾರದೊಂದಿಗೆ ವಹಿಸಬೇಕೆಂದು ಷರತ್ತು ಹಾಕಿದರು. ಆ ಷರತ್ತುನ್ನು ಸಭೆ ಒಪ್ಪಿಕೊಂಡಿತು.

ಮೊಬೈಲ್ ಟವರ್’ಗಾಗಿ ಈಗ ಗುರುತಿಸಿದ ಸ್ಥಳದ ಅಡೆತಡೆಗಳನ್ನು ಪರಿಹರಿಸಿ ಹೊಸ ಮೊಬೈಲ್ ಟವರ್ ಅಸ್ತಿತ್ವಕ್ಕೆ ತರುವಲ್ಲಿ ಸಮಿತಿಯು ಪಂಚಾಯತ್ ಸಹಕಾರದೊಂದಿಗೆ ಮುಂದಡಿ ಇಡುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ.ಹೊಸ ಇನ್ನೊಂದು ಮೊಬೈಲ್ ಟವರ್’ನ ಅಗತ್ಯವಿದ್ದು ಸಮಿತಿ ಸ್ಥಳದ ಅನ್ವೇಷಣೆಗೆ ಸಹಕರಿಸುವುದಾಗಿ ಒಪ್ಪಿಕೊಂಡಿದೆ.

ತಾತ್ಕಾಲಿಕ ಸಮಿತಿಗೆ ದಾಮೋದರ ಜತ್ತನ್, ಸೌಕೂರ್ ಅಶ್ಫಾಕ್ ಹಾಗೂ ತೊಂದರೆ ಅನುಭವಿಸುತ್ತಿರುವ ನಾಲ್ಕು ವಾರ್ಡ್’ಗಳ ಉಳಿದ ಪಂಚಾಯತ್ ಸದಸ್ಯರನ್ನು ಸೇರಿಸಿಕೊಂಡು ಪೂರ್ಣ ಪ್ರಮಾಣದ ಸಮಿತಿ ಅಸ್ತಿತ್ವಕ್ಕೆ ತರುವದೆಂದು ನಿರ್ಣಯಿಸಲಾಯಿತು.

ಗ್ರಾಮದ ಮೊಬೈಲ್ ಸಂಪರ್ಕ ಸಮಸ್ಯೆ ಕುರಿತು ಜಿಲ್ಲಾಧಿಕಾರಿಯವರಿಗೆ ಒಂದು ಮನವಿ ನೀಡಲು ನಿರ್ಧಾರ ಮಾಡಲಾಗಿದೆ.ಸಮಿತಿಯ ಪ್ರಯತ್ನದ ಫಲಶ್ರುತಿಯಾಗಿ ಈಗಾಗಲೇ ಮೊಬೈಲ್ ಸಂಪರ್ಕ ಸಮಸ್ಯೆ ಕೊನೆಗೊಂಡು ಮೊಬೈಲ್ ಸಂಪರ್ಕ ಪುನಃ ಆರಂಭಗೊಂಡಿದೆ. ಇದೊಂದು ಸಮಿತಿಯ ಪ್ರಯತ್ನಕ್ಕೆ ಈ ಕೂಡಲೇ ದೊರೆತ ಸಕಾರಾತ್ಮಕ ಪ್ರತಿಕ್ರಿಯೆ. ತಾತ್ಕಾಲಿಕವಾಗಿಯಾದರೂ ಸಮಸ್ಯೆ ಪರಿಹಾರವಾದಂತಾಗಿದೆ ಎಂದು “ಸಂಪರ್ಕ ಸಮಸ್ಯೆಯ ಪರಿಹಾರಕ್ಕಾಗಿ ಗ್ರಾಮಸ್ಥರ ಸಮಿತಿ ” ತಿಳಿಸಿದೆ.

ನೆಟ್ವರ್ಕ್ ಸಮಸ್ಯೆಯ ಕುರಿತು ದಿ ಹಿಂದುಸ್ತಾನ್ ಗಝೆಟ್ ವಿಸ್ತೃತ ವರದಿ ಮಾಡಿತ್ತು. ಇದೀಗ ಗ್ರಾಮಸ್ಥರ ಸಮಸ್ಯೆಯೊಂದು ಪರಿಹಾರ ಕಂಡಂತಾಗಿದೆ.

Latest Indian news

Popular Stories