ಸಿದ್ದರಾಮಯ್ಯ ಸರ್ಕಾರದ ಮೇಲೆ ನೂರು ನಿರೀಕ್ಷೆ

ಸಮಿ, ವಿಜಯಪುರ

ವಿಜಯಪುರ : ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ಸದ್ದು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಈ ಬಾರಿ ವಿಜಯಪುರ ಜಿಲ್ಲೆಗೆ ಯಾವ ಅಭಿವೃದ್ಧಿ ಗ್ಯಾರಂಟಿ ನೀಡಲಿದ್ದಾರೆ ಎಂಬ ಕುತೂಹಲ ಕೆರಳಿದೆ.

ಬೃಹತ್ ಕೈಗಾರಿಕಾ ಹಾಗೂ ಸಕ್ಕರೆ ಖಾತೆಗಳ ಸಚಿವರು ಸಹ ಜಿಲ್ಲೆಯವರೆ ಆಗಿರುವುದರಿಂದ ಸಚಿವರಾದ ಎಂ.ಬಿ. ಪಾಟೀಲ ಹಾಗೂ ಶಿವಾನಂದ ಪಾಟೀಲರ ಅವರ ಮೇಲೆಯೂ ಬಹಳಷ್ಟು ನಿರೀಕ್ಷೆಗಳನ್ನು ಜನತೆ ಇರಿಸಿಕೊಂಡಿದ್ದಾರೆ.
ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗೆ ದೊಡ್ಡ ಅನುದಾನ, ಸರ್ಕಾರಿ ವೈದ್ಯಕೀಯ ಕಾಲೇಜು ಹೀಗೆ ಅನೇಕ ಬೇಡಿಕೆಗಳು ಈಡೇರಿಕೆಯಾಗಿಲ್ಲ.

ವಿಶೇಷವಾಗಿ ಬಹುನಿರೀಕ್ಷಿತ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ, ಹೊರ್ತಿ ರೇವಣಸಿದ್ದೇಶ್ವರ ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ದೊಡ್ಡಮೊತ್ತದ ಅನುದಾನ, ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯಕ್ಕೆ ಅನುದಾನ, ವಿಜಯಪುರ ಮಹಾನಗರ ಪ್ರಗತಿಗೆ ವಿಶೇಷ ಅನುದಾನ ಹೀಗೆ ಅನೇಕ ನಿರೀಕ್ಷೆಗಳನ್ನು ಜನತೆ ಇರಿಸಿಕೊಂಡಿದ್ದಾರೆ.

ಪ್ರವಾಸಿ ತಾಣಗಳ ಪ್ರಗತಿಗೂ ಸಹ ದೊಡ್ಡಮೊತ್ತದ ಯೋಜನೆಗಳು ವಿಜಯಪುರಕ್ಕೆ ಒಲಿದು ಬರಲಿವೆಯೇ ಎಂಬುದು ಕಾದು ನೋಡಬೇಕಿದೆ. ದ್ರಾಕ್ಷಿ ಕಣಜವಾಗಿರುವ ವಿಜಯಪುರಕ್ಕೆ ದ್ರಾಕ್ಷಿ ಬೆಳೆಗಾರರು ವಿಶೇಷ ಪ್ಯಾಕೇಜ್ ನಿರೀಕ್ಷೆ ಮಾಡಿದ್ದಾರೆ.
ಕೈಗಾರಿಕಾ ಸಚಿವರಾಗಿ ಎಂ.ಬಿ. ಪಾಟೀಲರೇ ಇರುವುದರಿಂದ ಜಿಲ್ಲೆಗೆ ದೊಡ್ಡ ಕೈಗಾರಿಕೆ ಆಗಮಿಸುವ ನಿರೀಕ್ಷೆ ಜನತೆಯಲ್ಲಿದೆ.
ಪೈಪ್ ಫ್ಯಾಕ್ಟರಿ, ಬ್ಯಾಟರಿ ಫ್ಯಾಕ್ಟರಿ ಹೊರತುಪಡಿಸಿ ಜಿಲ್ಲೆಯಲ್ಲಿ ಉತ್ಪಾದನಾ ವಲಯ ಇಂದಿಗೂ ಸಹ ಸದ್ದು ಮಾಡುತ್ತಿಲ್ಲ. 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೂಡಗಿಯಲ್ಲಿ ಸ್ಥಾಪನೆಯಾಗಿರುವ ಎನ್ಟಿಪಿಸಿ ಹೊರತುಪಡಿಸಿ ಜಿಲ್ಲೆಯಲ್ಲಿ ಹೇಳಿಕೊಳ್ಳುವ ಉತ್ಪಾದನೆ ಉದ್ಯಮಗಳು ಇಲ್ಲ. ಮುಳವಾಡ, ವಿಜಯಪುರ ನಗರ, ಉದ್ದೇಶಿತ ಅಲಿಯಬಾದ್ ಬಳಿ ಕೈಗಾರಿಕಾ ಪ್ರದೇಶ ಲಭ್ಯತೆಯೂ ಇದೆ. ಎಲ್ಲವೂ ಇದ್ದೂ ಏನೂ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪಾಟೀಲರು ವಿಜಯಪುರಕ್ಕೆ ಬೃಹತ್ ಪ್ರಾಜೆಕ್ಟ್ ತಂದೇ ತರುತ್ತಾರೆ ಎಂಬ ನಿರೀಕ್ಷೆ ಅಧಿಕವಾಗಿದೆ.

ಸಹಕಾರಿ ಒಡನಾಡಿ, ರೈತರ ಜೀವನಾಡಿ ಆಗಿರುವ ಶಿವಾನಂದ ಪಾಟೀಲರು ಸಕ್ಕರೆ ಹಾಗೂ ಜವಳಿ ಸಚಿವರು. ಈ ಕಾರಣಕ್ಕೆ ವಿಜಯಪುರ ನಗರದ ಜವಳಿ ಗಿರಣಿಗಳಿಗೆ ಪುನಶ್ಚೇತನ ಹಾಗೂ ಜವಳಿ ಪಾರ್ಕ ನಿರ್ಮಾಣ ಸಾಧ್ಯವಾಗಲಿದೆ ಎಂಬ ಕನಸು ಜನತೆಯಲ್ಲಿ ಜಾಗೃತಗೊಂಡಿದೆ.

ಈ ಎಲ್ಲವೂಗಳ ಜೊತೆಗೆ ಪ್ರವಾಸಿ ತಾಣಗಳ ಪ್ರಗತಿ, ಇಟ್ಟಂಗಿಹಾಳದಲ್ಲಿ ಫುಡ್ ಪಾರ್ಕ ನಿರ್ಮಾಣಕ್ಕೆ ಉತ್ತೇಜನ ಹಾಗೂ ಅನುದಾನ, ವಿಮಾನ ನಿಲ್ದಾಣ ಲೋಕಾರ್ಪಣೆ ಅಂತಿಮ ಕಾಮಗಾರಿಗೆ ಅನುದಾನ, ಮಹಾನಗರ ಪಾಲಿಕೆಗೆ ವಿಶೇಷ ಅನುದಾನ, ಅಕ್ಕಮಹಾದೇವಿ ಮಹಿಳಾ ವಿಶೇಷ ಅನುದಾನ ಹೀಗೆ ನೂರೆಂಟು ನಿರೀಕ್ಷೆಗಳನ್ನು ಜನತೆ ಇರಿಸಿಕೊಂಡಿದ್ದಾರೆ.

Latest Indian news

Popular Stories