ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಇಸ್ಲಾಮಾಬಾದ್ ಹೈಕೋರ್ಟ್ ಜಾಮೀನು

ಲಾಹೋರ್: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ಮಂಗಳವಾರ ಆದೇಶಿಸಿರುವ ಇಸ್ಲಾಮಾಬಾದ್ ಹೈಕೋರ್ಟ್ ಆಗಸ್ಟ್ 5 ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಹಿಂದಿನ ತೀರ್ಪನ್ನು ಅಮಾನತುಗೊಳಿಸಿದೆ.
ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್ ಸಿ) ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್ ಹಾಗೂ ನ್ಯಾಯಮೂರ್ತಿ ತಾರಿಕ್ ಮೆಹಮೂದ್ ಜಹಾಂಗಿರಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಬಹು ನಿರೀಕ್ಷಿತ ಕಾಯ್ದಿರಿಸಿದ ತೀರ್ಪನ್ನು ಪ್ರಕಟಿಸಿದೆ.
ಸೋಮವಾರ, ಇಸ್ಲಾಮಾಬಾದ್ ಹೈಕೋರ್ಟ್ ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಯನ್ನು ಪ್ರಶ್ನಿಸಿ ಇಮ್ರಾನ್ ಖಾನ್ ಅವರ ಮನವಿಯ ಕುರಿತ ತೀರ್ಪನ್ನು ಕಾಯ್ದಿರಿಸಿತ್ತು. ಇಸ್ಲಾಮಾಬಾದ್ ನ ವಿಚಾರಣಾ ನ್ಯಾಯಾಲಯವು 70 ವರ್ಷದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷರನ್ನು ಆಗಸ್ಟ್ 5 ರಂದು ದೋಷಿ ಎಂದು ಪರಿಗಣಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಇಮ್ರಾನ್ ಖಾನ್ ರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು.ನ್ಯಾಯಾಲಯದ ತೀರ್ಪಿನ ನಂತರ ಅವರನ್ನು ಬಂಧಿಸಲಾಯಿತು.