ಮೊದಲ ಟಿ20: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 2 ವಿಕೆಟ್ ರೋಚಕ ಜಯ

ವಿಶಾಖಪಟ್ಟಣ: ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 2 ವಿಕೆಟ್ ಗಳ ರೋಚಕ ಜಯ ದಾಖಲಿಸಿದೆ.

ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 209 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 19.5 ಓವರ್ ನಲ್ಲಿ 214 ರನ್ ಗಳಿಸಿ 2 ವಿಕೆಟ್ ಗಳ ಅಂತರದ ರೋಚಕ ಜಯ ದಾಖಲಿಸಿದೆ. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಗಿದ್ದ ಭಾರತ ತಂಡಕ್ಕೆ ಆರಂಭದಲ್ಲೇ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ರನೌಟ್ ಗೆ ಬಲಿಯಾಗಿದ್ದರು. ಆದರೆ ಮತ್ತೊಂದು ತುದಿಯಲ್ಲಿದ್ದ ಉದಯೋನ್ಮುಖ ಆಟಗಾರ ಯಶಸ್ವಿ ಜೈಸ್ವಾಲ್ 8 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ 21ರನ್ ಗಳಿ ಭರ್ಜರಿ ಇನ್ನಿಂಗ್ಸ್ ಆಡುವ ಮುನ್ಸೂಚನೆ ನೀಡಿದರು. ಆದರೆ ಅವರು 21ರನ್ ಗಳಿಗೇ ಮ್ಯಾಥ್ಯೂ ಶಾರ್ಟ್ ಬೌಲಿಂಗ್ ನಲ್ಲಿ ಔಟ್ ಆದರು.

ಬಳಿಕ ಇಶಾನ್ ಕಿಶನ್ (58 ರನ್) ಮತ್ತು ನಾಯಕ ಸೂರ್ಯ ಕುಮಾರ್ ಯಾದವ್ (80 ರನ್) ಜೋಡಿ ಭರ್ಜರಿ ಜೊತೆಯಾಟವಾಡಿತು. ಮೂರನೇ ವಿಕೆಟ್ ನಲ್ಲಿ ಈ ಜೋಡಿ 112 ರನ್ ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟವಾಡಿದರು. ಈ ಹಂತದಲ್ಲಿ ಅರ್ಧಶತಕ ಸಿಡಿಸಿ ಅಪಾಯಕಾರಿಯಾಗಿದ್ದ ಇಶಾನ್ ಕಿಶನ್ ತನ್ವೀರ್ ಸಂಘ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಸೂರ್ಯ ಕುಮಾರ್ ಯಾದವ್ ಜೊತೆಗೂಡಿದ ತಿಲಕ್ ವರ್ಮಾ ಕೂಡ ಭರ್ಜರಿ ಬ್ಯಾಟಿಂಗ್ ಮುನ್ಸೂಚನೆ ನೀಡಿ 2 ಬೌಂಡರಿ ಸಹಿತ 12 ರನ್ ಗಳಿಸಿ ಬಂದಷ್ಟೇ ವೇಗವಾಗಿ ಮತ್ತದೇ ತನ್ವೀರ್ ಸಂಘಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಭಾರತ ಗೆಲುವಿನ ಸನಿಹದತ್ತ ಸಾಗುತ್ತಿತ್ತು. ಈ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾದ ನಾಯಕ ಸೂರ್ಯ ಕುಮಾರ್ ಯಾದವ್ ಬೆಹೆಂಡ್ರಾಫ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

ಈ ವೇಳೆ ಭಾರತ ಕೊಂಚ ಹಿನ್ನಡೆ ಅನುಭವಿಸಿತು. ಬಳಿಕ ಬಂದ ಅಕ್ಸರ್ ಪಟೇಲ್ (2) ಸೀನ್ ಅಬಾಟ್ ಗೆ ವಿಕೆಟ್ ಒಪ್ಪಿಸಿದರೆ, ರವಿ ಬಿಷ್ಣೋಯ್ ರನೌಟ್ ಗೆ ಬಲಿಯಾದರು. ಈ ಹಂತದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವ ಹೊಣೆ ಐಪಿಎಲ್ ಪ್ರತಿಭೆ ರಿಂಕು ಸಿಂಗ್ ಮೇಲೆ ಬಿತ್ತು. ಅದನ್ನು ರಿಂಕು ಸಿಂಗ್ ಯಶಸ್ವಿಯಾಗಿ ನಿಭಾಯಿಸಿದರಾದರೂ ಈ ಹಂತದಲ್ಲಿ ಅರ್ಶ್ ದೀಪ್ ಸಿಂಗ್ ರನೌಟ್ ಗೆ ಬಲಿಯಾದರು. ಅಂತಿಮವಾಗಿ ತಂಡದ ಗೆಲುವಿಗೆ 1 ಎಸೆತಕ್ಕೆ 1ರನ್ ಬೇಕಿದ್ದಾಗ ರಿಂಕು ಸಿಂಗ್ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

ಸೀನ್ ಅಬಾಟ್ ಎಸೆದ ಆ ಅಂತಿಮ ಎಸೆತವೂ ನೋಬಾಲ್ ಆಗಿತ್ತು. ಆ ಮೂಲಕ ಭಾರತ 19.5 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತಾದರೂ, ರಿಂಕು ಸಿಂಗ್ ಸಿಡಿಸಿದ ಸಿಕ್ಸರ್ ತಂಡದ ರನ್ ಗಳಿಕೆಗೆ ಬರಲಿಲ್ಲ. ಕಾರಣ ರಿಂಕು ಸಿಂಗ್ ಸಿಕ್ಸರ್ ಸಿಡಿಸುವ ಮೂದಲೇ ಸೀನ್ ಆಬಾಟ್ ನೋಬಾಲ್ ರೂಪದಲ್ಲಿ 1 ರನ್ ನೀಡಿದ್ದರಿಂದ ಭಾರತ ಅದಾಗಲೇ ಗೆದ್ದಿದ್ದಾಗಿತ್ತು. ಹೀಗಾಗಿ ಈ ಸಿಕ್ಸರ್ ಅನ್ನು ತಂಡದ ರನ್ ಗಳಿಗೆ ಅಂಪೈರ್ ಗಳು ಸೇರಿಸಲಿಲ್ಲ.

Latest Indian news

Popular Stories