ಬಿಜೆಪಿ ಗೆದ್ದ ಮೂರು ರಾಜ್ಯದಲ್ಲಿ “ಕಾಂಗ್ರೆಸ್” ಸೋಲಲು ದೊಡ್ಡ ಕಾರಣ “ಅಂತರಿಕ ಜಗಳ” !

ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದು ಮೂರು ರಾಜ್ಯಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದರಲ್ಲಿ ಮುಖ್ಯವಾಗಿ ರಾಜಸ್ಥಾನ, ಛತ್ತೀಸ್ಗಢ ದಲ್ಲಿ ಕಾಂಗ್ರೆಸ್ ಆಡಳಿತವಿದ್ದು ಅದನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಇನ್ನು ಮಧ್ಯ ಪ್ರದೇಶದಲ್ಲಿ ಕಳೆದ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರ ಹೊಮ್ಮಿತ್ತು. ಆದರೆ ಈ ಬಾರಿ ಮಧ್ಯೆ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆದ್ದು ಬೀಗಿದೆ.

ಇದರಲ್ಲಿ ಬಿಜೆಪಿಯ ಗೆಲುವಿನಲ್ಲಿ ಕಾಂಗ್ರೆಸ್ ಪಕ್ಷದ ಅಂತರಿಕ ಕಚ್ಚಾಟ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದೆ ಎಂಬುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಅಧಿಕಾರ ಬಂದಾಗ ಜನರ ಆಶೋತ್ತರಕ್ಕಿಂತ ಅಧಿಕಾರದ ದಾಹಕ್ಕಾಗಿ ಕಚ್ಚಾಟ ನಡೆಸಿದರೆ ಮತದಾರ ಮನೆಯ ದಾರಿ ತೋರಿಸುತ್ತಾನೆ ಎಂಬುವುದಕ್ಕೆ ಈ ಚುನಾವಣೆ ಸ್ಪಷ್ಟ ನಿದರ್ಶನ.

ರಾಜಸ್ಥಾನದಲ್ಲಿ ಸಚಿನ್ ಪೈಲೆಟ್ ಮತ್ತು ಅಶೋಕ್ ಗೆಹ್ಲೋಟ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆದ ಕಚ್ಚಾಟ, ಬಹಿರಂಗ ಪ್ರತಿಭಟನೆ, ರೆಸಾರ್ಟ್ ರಾಜಕೀಯದಿಂದ ರೋಸಿ ಹೋದ ಜನ ಈ ಬಾರಿ‌ ಮುಂಚಿನ ಸಂಪ್ರದಾಯದಂತೆ ಪರ್ಯಾಯ ಪಕ್ಷ ಬಿಜೆಪಿಯತ್ತ ಮುಖ ಮಾಡಿದ್ದಾನೆ.

ಇನ್ನು ಛತ್ತೀಸ್ಗಢದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ ಸಿಎಂ ಭೂಪೇಶ್ ಬಾಘೇಲ್ ಮತ್ತು ಆರೋಗ್ಯ ಸಚಿವ (ಮತ್ತು ನಂತರ ಉಪ ಸಿಎಂ) ಟಿ ಎಸ್ ಸಿಂಗ್‌ಡಿಯೊ ನಡುವಿನ ಸಾರ್ವಜನಿಕ ಜಗಳ ಸೇರಿದಂತೆ ನಾಯಕರ ನಡುವೆ ನಿರಂತರ ನಡೆದ ಶಕ್ತಿ ಪ್ರದರ್ಶನದಿಂದ ಜನತೆ ರೋಸಿ ಹೋಗಿದ್ದರು. 2.5 ವರ್ಷಗಳ ನಂತರ ಮುಖ್ಯಮಂತ್ರಿ ಬದಲಾವಣೆಯ ಉದ್ದೇಶಿತ ಸೂತ್ರದ ವದಂತಿಗಳ ನಡುವೆ ಪಕ್ಷದ ಹೈಕಮಾಂಡ್ ಅನ್ನು ಭೇಟಿ ಮಾಡಲು ದೆಹಲಿಯಲ್ಲಿ ಸಿಂಗ್‌ಡಿಯೊ ಕ್ಯಾಂಪಿಂಗ್ ಮಾಡಿದ್ದರು. ಅವಧಿಯ ಮಧ್ಯದಲ್ಲಿ ಸಿಎಂ ಕುರ್ಚಿಗಾಗಿ‌ ದೊಡ್ಡ ರಂಪಾಟವೇ ನಡೆದಿತ್ತು.

ಬಾಘೇಲ್ ಬೆಂಬಲಿಗರು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಶಕ್ತಿ ಪ್ರದರ್ಶನ ನಡೆಸಲು ಈ ಸಂದರ್ಭದಲ್ಲಿ ದೆಹಲಿಗೆ ಹಾರಿದ್ದರು. ಆ ಸಂದರ್ಭದಲ್ಲಿ ಜಗಳ ಶಮನಗೊಂಡರೂ ಅಂತರಿಕ ಅಸಮಾಧಾನ ಹಾಗೆಯೇ ಉಳಿದಿತ್ತು.

ಸಿಂಗ್‌ಡಿಯೊ ಕಾಲಕಾಲಕ್ಕೆ ಹಲವಾರು ಸಮಸ್ಯೆಗಳ ಬಗ್ಗೆ ತಮ್ಮ ಅಸಮಾಧಾನವನ್ನು ಎತ್ತುತ್ತಿದ್ದರು. ಚುನಾವಣೆಯ ಪೂರ್ವದಲ್ಲಿ ಬಾಘೇಲ್ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ “ಭರೋಸಾ ಹೈಗೆ ಭೂಪೇಶ್ ಹೈ” ಎಂಬ ಘೋಷಣೆಯನ್ನು ವ್ಯಾಪಕಗೊಳಿಸಿದರು. ರಾಜ್ಯದಾದ್ಯಂತ ಪೋಸ್ಟರ್‌ಗಳನ್ನು ಹಚ್ಚಲಾಯಿತು. ನಂತರ ಹೈಕಮಾಂಡ್ ‘ಕಾಂಗ್ರೆಸ್ ಸರ್ಕಾರ್, ಭರೋಸ್ ಕಾ ಸರ್ಕಾರ್’ ಎಂದು ಬದಲಾಯಿಸಲಾಯಿಸಬೇಕಾಯಿತು. ಈ ಎಲ್ಲ ಕಚ್ಚಾಟವನ್ನು ಸೂಕ್ಷ್ಮವಾಗಿ ಗಮನಿಸಿದ ಮತದಾರ ಕಾಂಗ್ರೆಸ್ ಭದ್ರಕೋಟೆಯನ್ನು ಬಿಜೆಪಿಗೆ ಹಸ್ತಾಂತರಿಸಿದ್ದಾನೆ.

ಜೋತಿರಾಧಿತ್ಯ ಮತ್ತು ಕಮಲನಾಥ್ ನಡುವಿನ ತಿಕ್ಕಟ ನಂತರ ಜೋತಿರಾಧಿತ್ಯ ಸಿಂಧ್ಯಾ ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡದ್ದು ಕೂಡ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್’ಗೆ ದೊಡ್ಡ ಪೆಟ್ಟು ನೀಡಿದೆ.

ಸೈದ್ದಾಂತಿಕ ಸ್ಪಷ್ಟತೆಯಿಲ್ಲದೆ ಮೃದು ಹಿಂದುತ್ವಕ್ಕೆ ವೇದಿಕೆ ಕಲ್ಪಿಸಿದ್ದು‌ ಕೂಡ ಛತ್ತೀಸ್ಗಢ ಮತ್ತು ಮಧ್ಯೆ ಪ್ರದೇಶದಲ್ಲಿ ದೊಡ್ಡ ಪರಿಣಾಮ ಬೀರಿದ್ದು ಹಿಂದುತ್ವದ ರಾಜಕೀಯ ಬಂದಾಗ ಮತದಾರ ಬಿಜೆಪಿಯ ಹಾರ್ಡ್’ಕೋರ್ ಹಿಂದುತ್ವದತ್ತ ವಾಲುತ್ತಾನೆ ಹೊರತು ಮೃದು ಹಿಂದುತ್ವದ ಕಡೆ ಅಲ್ಲ ಎಂಬುವುದನ್ನು ಕಾಂಗ್ರೇಸಿಗರಿಗೆ ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.

ಮಧ್ಯೆ ಪ್ರದೇಶದಲ್ಲಿ ಒಬಿಸಿ ಕಾರ್ಡ್ ಕಾಂಗ್ರೆಸ್ ಎತ್ತಿಕೊಂಡರು ಕಮಲನಾಥ್ ಮತ್ತು ದಿಗ್ವಿಜಯ ಸಿಂಗ್ ಮೇಲ್ವರ್ಗದವರು ಎಂಬುವುದು ಕೂಡ ಹಿನ್ನಡೆ ಕಾರಣವಾಗಿದೆ.

– ಯಾಸೀನ್ ಕೋಡಿಬೆಂಗ್ರೆ

Latest Indian news

Popular Stories