
ಪ್ಯಾಲೇಸ್ಟಿನಿಯರ ಪರ ನಿಂತ ಕಾಂಗ್ರೆಸ್, ತಕ್ಷಣ ಕದನ ವಿರಾಮ ಘೋಷಿಸಲು ಒತ್ತಾಯ
ದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಪ್ಯಾಲೆಸ್ತೀನ್ ಹೋರಾಟಕ್ಕೆ ತನ್ನ ಅಚಲ ಬೆಂಬಲವನ್ನು ವ್ಯಕ್ತಪಡಿಸಿದೆ. ಕಳೆದ ಎರಡು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಜನರ ಜೀವವನ್ನು ಬಲಿತೆಗೆದುಕೊಂಡು ನಡೆಯುತ್ತಿರುವ ಯುದ್ಧದ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿ ಹೇಳಿಕೆ ಹೊರಡಿಸಿದೆ.
“ಕಳೆದ ಎರಡು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟ ಮಧ್ಯಪ್ರಾಚ್ಯದಲ್ಲಿ ನಡೆದ ಯುದ್ಧದ ಬಗ್ಗೆ CWC ದುಃಖವನ್ನು ವ್ಯಕ್ತಪಡಿಸುತ್ತದೆ. CWC ಪ್ಯಾಲೇಸ್ಟಿನಿಯನ್ ಜನರು ಭೂಮಿಯ ಹಕ್ಕಿಗಾಗಿ ನಡೆಸುತ್ತಿರುವ ದೀರ್ಘಕಾಲದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಸ್ವ-ಆಡಳಿತ, ಮತ್ತು ಘನತೆ ಮತ್ತು ಗೌರವದಿಂದ ಬದುಕಲು ಅನುವು ಮಾಡುವ ಕುರಿತು ಹೇಳಿಕೆಯಲ್ಲಿ ತಿಳಿಸಿದೆ.
ಈ ಪ್ರದೇಶದಲ್ಲಿ ನ್ಯಾಯ ಮತ್ತು ಶಾಂತಿಯ ತತ್ವಗಳಿಗೆ ಅವರ ಬದ್ಧತೆಯನ್ನು ಕಾಪಾಡಲು ಕರೆ ನೀಡಿದ್ದು ಇದು ಪ್ಯಾಲೇಸ್ಟಿನಿಯನ್ ಜನರ ಸ್ವ-ನಿರ್ಣಯದ ಹಕ್ಕಿನ ಪರವಾಗಿ ಅವರ ನಿಲುವನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದ್ದಾರೆ.ಇದೇ ಸಂದರ್ಭದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ನ್ಯಾಯಯುತ ಪರಿಹಾರಕ್ಕಾಗಿ ಕರೆ ನೀಡಿದೆ.
ಇದಲ್ಲದೆ, ಸಿಡಬ್ಲ್ಯೂಸಿ ತಕ್ಷಣದ ಕದನ ವಿರಾಮ ವಿಧಿಸಲು ಒತ್ತಾಯಿಸಿದ್ದು ಮತ್ತಷ್ಟು ಜೀವಹಾನಿ ತಡೆಗಟ್ಟುವ ಸಲುವಾಗಿ ಯುದ್ಧವನ್ನು ನಿಲ್ಲಿಸುವ ತುರ್ತು ಅಗತ್ಯವನ್ನು ಒತ್ತಿಹೇಳಿದೆ. ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾಗಿರುವ ಹಾಗೂ ಎಲ್ಲಾ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಸಮಗ್ರ ಮಾತುಕತೆಗಳನ್ನು ಪ್ರಾರಂಭಿಸಲು ಅವರು ಕರೆ ನೀಡಿದ್ದಾರೆ




