ಇಂದು ಬಿಜೆಪಿಯ ಪ್ರಬಲ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ – ಮಾತುಕತೆ ಯಶಸ್ವಿ

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಆಡಳಿತರೂಢ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ ನಂತರ ಕೇಸರಿ ಪಕ್ಷಕ್ಕೆ ಗುಡ್ ಬೈ ಹೇಳಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಗೆ ಕರೆತರಲು ಲಿಂಗಾಯಿತ ನಾಯಕರಾದ ಎಂಬಿ ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಇಂದು ತಡ ರಾತ್ರಿಯವರೆಗೂ ಶಾಮನೂರ ಶಿವಶಂಕರಪ್ಪ ಅವರ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಎಂಬಿ ಪಾಟೀಲ್ ಅವರು ಶೆಟ್ಟರ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಕಾಂಗ್ರೆಸ್ ನಾಯಕರ ಮಾತುಕತೆ ಯಶಸ್ವಿಯಾಗಿದ್ದು, ನಾಳೆಯೇ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಶೆಟ್ಟರ್ ಅವರು ಕಾಂಗ್ರೆಸ್ ಸೇರಲು ಒಪ್ಪಿದ್ದು, ತಮ್ಮ ಜೊತೆ ಬರುವ ನಾಯಕರಿಗೂ ಸೂಕ್ತ ಸ್ಥಾನಮಾನ ನೀಡಬೇಕು, ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮ ಗೌರವಕ್ಕೆ ತಕ್ಕ ಸ್ಥಾನಮಾನ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

Latest Indian news

Popular Stories