ಜೆಡಿಎಸ್ ಎಂಎಲ್ಸಿ ಮರಿತಿಬ್ಬೇ ಗೌಡ, ಮಾಜಿ ಎಂಎಲ್ಸಿ ಅಪ್ಪಾಜಿ ಗೌಡ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಮಂಡ್ಯದಿಂದ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ(MLC) ಮರಿತಿಬ್ಬೇಗೌಡ ಮತ್ತು ಮಾಜಿ MLC ಅಪ್ಪಾಜಿಗೌಡ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಅವರ ಗೆಲುವಿಗೆ ಶ್ರಮಿಸುವುದಾಗಿ ಇಬ್ಬರು ಒಕ್ಕಲಿಗ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದ ನಂತರ ಹೇಳಿದ್ದಾರೆ.

“ನಾನು ಮೊದಲು ಕಾಂಗ್ರೆಸ್ ಟಿಕೆಟ್‌ನಲ್ಲಿ ಎಂಎಲ್‌ಸಿಯಾದೆ, ಎರಡನೇ ಬಾರಿ ಸ್ವತಂತ್ರನಾಗಿ ಪ್ರತಿನಿಧಿಯಾದೆ. ಆದರೆ ಕಳೆದ ಎರಡು ಬಾರಿ ಜೆಡಿಎಸ್ ಟಿಕೆಟ್ ನೀಡಿದ್ದು ಬಿಟ್ಟರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನನಗೆ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿಲ್ಲ ಎಂದು ಮರಿತಿಬ್ಬೇಗೌಡ ಆರೋಪಿಸಿದ್ದಾರೆ.

ಜೆಡಿಎಸ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಕಾರ್ಯಕರ್ತರು-ನಾಯಕರ ಅಭಿಪ್ರಾಯಗಳಿಗೆ ಯಾವುದೇ ಮೌಲ್ಯವಿಲ್ಲ. ದೇವೇ ಗೌಡರು ಮತ್ತು ಕುಮಾರಸ್ವಾಮಿ ಕಾವೇರಿ ವಿಚಾರವನ್ನು ಭಾವನಾತ್ಮಕವಾಗಿ ಬಳಸಿಕೊಂಡಿದ್ದಾರೆ. ಜೆಡಿಎಸ್ ರೈತರ ಹೆಸರಿನಲ್ಲಿ ರಾಜಕೀಯ ಮಾಡಿದೆ, ಆದರೆ ಮಂಡ್ಯಕ್ಕೆ ಏನೂ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.

ಮಂಡ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇದೇ ವೇಳೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರಾಜರಾಜೇಶ್ವರಿ ನಗರದ ಆಶಾ ಸುರೇಶ್ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ಹಾಲಿ ಬಿಜೆಪಿ ಶಾಸಕ ಮುನಿರತ್ನ ಅವರ ಹಿಡಿತದಿಂದ ಬೇಸತ್ತು ಬಿಜೆಪಿ ತೊರೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರ ಕೆಲಸ ಮಾಡಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Latest Indian news

Popular Stories