ಮಂಡ್ಯ ಲೋಕಸಭೆ ಜೆಡಿಎಸ್ ಪಾಲು: ಮುನಿಸಿಕೊಂಡ ಬಿಜೆಪಿ ಮುಖಂಡರು, ಮನವೊಲಿಸಲು ವಿಜಯೇಂದ್ರ ಯತ್ನ!

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಕಗ್ಗಂಟಾಗಿ ಉಳಿದಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಅಂತೂ ಜೆಡಿಎಸ್‌ ಪಾಲಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆಗೆ ಬಿಜೆಪಿ ಮುಖಂಡರು ಅಸಮಾಧಾನಗೊಂಡಿದ್ದು, ಮುನಿಸಿಕೊಂಡಿರುವ ನಾಯಕರ ಮನವೊಲೀಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಯತ್ನ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಮಂಡ್ಯದಲ್ಲಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ವಿಜಯೇಂದ್ರ ಅವರು, ಬಿಜೆಪಿ-ಜೆಡಿಎಸ್ ಸದಸ್ಯರೊಂದಿಗೆ ಚರ್ಚೆ ನಡೆಸಿ, ಒಗ್ಗಟ್ಟು ಮೂಡಿಸಲು ಯತ್ನ ನಡೆಸಿದರು.

ಮಾಜಿ ಸಚಿವ ನಾರಾಯಣಗೌಡ ಸೇರಿದಂತೆ ಪಕ್ಷದ ಮುಖಂಡರನ್ನು ಭೇಟಿ ಮಾಡಿದ ವಿಜಯೇಂದ್ರ ಅವರು, ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡುವಂತೆ ತಿಳಿಸಿದರು. ಆದರೆ, ಸಭೆಯಲ್ಲಿ ಕೆಲ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು ಎಂದು ತಿಳಿದುಬಂದಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಮಂಡ್ಯ ಮತ್ತು ಇತರ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ. ಕರ್ನಾಟಕದಿಂದ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಪ್ರಧಾನಿ ಮೋದಿ ಅವರನ್ನು ಬಲಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಸುಮಲತಾ ಕುರಿತು ಮಾತನಾಡಿ, ನಾಯಕರಿಗೆ ಸುಮಲತಾ ಅವರ ಮೇಲೆ ಅಪಾರ ಗೌರವವಿದೆ. ಮಂಡ್ಯ ಮತ್ತು ಮೈಸೂರು ಪ್ರವಾಸದ ವೇಳೆ ಸುಮಲತಾ ಅವರನ್ನು ಭೇಟಿ ಮಾಡುತ್ತೇನೆಂದು ಹೇಳಿದರು. ಇದೇ ವೇಳೆ ಮಾಜಿ ಸಚಿವ ನಾರಾಯಣಗೌಡ ಬಿಜೆಪಿ ತೊರೆಯುತ್ತಾರೆ ಎಂಬ ವದಂತಿಯನ್ನು ವಿಜಯೇಂದ್ರ ಅವರು ತಳ್ಳಿಹಾಕಿದರು.

ಈ ನಡುವೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು ಮಂಗಳವಾರ ಭೇಟಿ ಮಾಡಿದ್ದು, ಚುನಾವಣೆಗೆ ಬೆಂಬಲ ಕೋರಿದರು

Latest Indian news

Popular Stories