ವಿಜಯಪುರ : ಆನಲೈನ್ ವಂಚನೆಯ ರೂಪವಾಗಿ ಒನ್ ನೇಷನ್ ಒನ್ ಕಾರ್ಡ್ ನೊಂದಣಿ ಪ್ರಕ್ರಿಯೆಗೆ ನೇಮಕಾತಿ ನಡೆಯಲಿದ್ದು, ಇಂತಿಷ್ಟು ಹಣ ಪಾವತಿಸಿದರೆ ಉದ್ಯೋಗ ಒದಗಿಸುವುದಾಗಿ ವಿಜಯಪುರದ ಅಮಾಯಕ ಸರ್ಕಾರೇತರ ಸಂಸ್ಥೆಯೊಂದನ್ನು ದಾಳವಾಗಿಸಿಕೊಂಡು ಕೋಟಿ ರೂ. ಸನಿಹ ಹಣ ವಂಚಿಸಿದ ದುರುಳರನ್ನು ವಿಜಯಪುರ ಪೊಲೀಸರು ಮಟ್ಟ ಹಾಕಿದ್ದರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆಂಧ್ರಪ್ರದೇಶ ಮೂಲದ ಸುಧೀರಬಾಬು ಉರ್ಫ್ ಸುಧೀರ ರೆಡ್ಡಿ ಸುಂಕಪ್ಪ, ಶಶಾಂಕ ಎಸ್.ಎನ್. ನಾಗರಾಜ್ ಎಂದು ಗುರುತಿಸಲಾಗಿದ್ದು, ಸರಿಸುಮಾರು 95,75,548 ಲಕ್ಷ ರೂ. ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ, ಆನಲೈನ್ ಮೂಲಕ ವಂಚನೆ ಜಾಲವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ದೂರು ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಪ್ರಕರಣದಲ್ಲಿ ದೂರುದಾರರಾಗಿರುವ ತಿಕೋಟಾ ತಾಲೂಕಿನ ತೊರವಿ ಗ್ರಾಮದ ಶಶಿಕಲಾ ಗುರುಪಾದಯ್ಯ ತಳಸದಾ ಅವರು ಸ್ಪೂರ್ತಿ ಮಹಿಳಾ ಗ್ರಾಮೀಣಾಭಿವೃದ್ಧಿ ಸರ್ವೀಸ್ ಅಸೋಸಿಯೇಷನ್ ಎಂಬ ಸರ್ಕಾರೇತರ ಸಂಸ್ಥೆ ನಡೆಸುತ್ತಿದ್ದು, ಈ ಸಂಸ್ಥೆಯನ್ನು ಸಂಪರ್ಕಿಸಿದ ವಂಚಕರು ಒನ್ ನೇಷನ್ ಒನ್ ಕಾರ್ಡ್ ನೊಂದಣಿ ಪ್ರಕ್ರಿಯೆಗೆ ಉದ್ಯೋಗಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿ ನಂಬಿಸಿದ್ದಾರೆ, ಡಾಟಾ ಎಂಟ್ರಿ ಆಪರೇಟರ್ಗೆ ಪರೀಕ್ಷಾ 1299 ರೂ., ಸಂಯೋಜಕ ಹುದ್ದೆಗೆ ಭದ್ರತಾ ಠೇವಣಿಯಾಗಿ 10 ಸಾವಿರ ರೂ. ಹೀಗೆ ಅನೇಕ ಹುದ್ದೆಗಳಿಗೆ ವಿವಿಧ ರೀತಿಯ ಠೇವಣಿ, ಪರೀಕ್ಷಾ ಶುಲ್ಕ ವಿಧಿಸಿ ರಾಜ್ಯದಾದ್ಯಂತ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿದ್ದಾರೆ, ಅವರ ವರ್ತನೆ ಬಗ್ಗೆ ಅನುಮಾನ ವ್ಯಕ್ತಪಡಿಸಿಕೊಂಡ ಸರ್ಕಾರೇತರ ಸಂಸ್ಥೆ ನಡೆಸುತ್ತಿರುವ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರನ್ನು ಆಧರಿಸಿ ತನಿಖೆಗೆ ಅಣಿಯಾದ ಪೊಲೀಸರು ಅತ್ಯಂತ ಸೂಕ್ಷ್ಮವಾಗಿ ಈ ಪ್ರಕರಣವನ್ನು ತನಿಖೆ ನಡೆಸಿ ದೂರು ಬಂದ ಕೆಲವೇ ಗಂಟೆಗಳಲ್ಲಿ ಪ್ರಕರಣ ಬೇಧಿಸಿದ್ದಾರೆ. ಒಟ್ಟಾರೆಯಾಗಿ 95,75,548 ಲಕ್ಷ ರೂ.ಗಳನ್ನು ವಂಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವಿವರಿಸಿದರು.
ಮೊಬೈಲ್ ಲೋಕೇಷನ್, ಇ-ಮೇಲ್ ಐಡಿಗಳ ಐಪಿ ಅಡ್ರೆಸ್, ಮೊಬೈಲ್ ಲೋಕೇಷನ್ ಸೇರಿದಂತೆ ಅತ್ಯಾಧುನಿಕ ತನಿಖಾ ವಿಧಾನಗಳನ್ನು ಅನುಸರಿಸಿ ಮಧುಗುರಿಗೆ ತೆರಳಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಆರೋಪಿಗೆ ಸಂಬಂಧಿಸಿದಂತೆ ಅಕೌಂಟ್ಗಳನ್ನು ಫ್ರೀಜಿಂಗ್ ಮಾಡುವಂತೆ ಕೋರಲಾಗಿದ್ದು, ಆ ಪೈಕಿ ಎರಡು ಅಕೌಂಟ್ಗಳು ಫ್ರೀಜಿಂಗ್ ಆಗಿದ್ದು 10 ಲಕ್ಷ ರೂ.ಗಳನ್ನು ಹೋಲ್ಡ್ ಮಾಡಲಾಗಿದೆ ಎಂದು ವಿವರಿಸಿದರು.
ಸಿಇಎನ್ ವಿಭಾಗದ ಸಿಪಿಐ ರಮೇಶ ಅವಜಿ, ಪಿಎಸ್ಐ ಮಲ್ಲಿಕಾರ್ಜುನ ತಳವಾರ, ಪಿ.ವೈ. ಅಂಬಿಗೇರ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಈ ಪ್ರಕರಣವನ್ನು ಬೇಧಿಸಿದೆ ಎಂದು ವಿವರಿಸಿದರು.