ಒತ್ತಡ, ವಿರೋಧಕ್ಕೆ ಮಣಿದ ಸರ್ಕಾರ: ಕಬಿನಿ ಜಲಾಶಯದ ಕ್ರೆಸ್ಟ್ ಗೇಟ್‌ಗಳು ಬಂದ್, ತಮಿಳುನಾಡಿಗೆ ಹರಿಸುತ್ತಿದ್ದ ನೀರಿನ ಮಟ್ಟದಲ್ಲಿ ಇಳಿಕೆ!

ಮೈಸೂರು: ಮಳೆ ಅಭಾವದಿಂದಾಗಿ ರಾಜ್ಯ ಸಂಕಷ್ಟದಲ್ಲಿದ್ದರೂ, ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ವಿರೋಧ ಪಕ್ಷ ಹಾಗೂ ರೈತರಿಂದ ತೀವ್ರ ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ, ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿದ್ದ ನೀರಿನ ಮಟ್ಟವನ್ನು ಇಳಿಕೆ ಮಾಡಿದೆ.

ಸರ್ವಪಕ್ಷ ಸಭೆ ಬಳಿಕ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿದ್ದ ನೀರಿನ ಪ್ರಮಾಣವನ್ನು ಇಳಿಕೆ ಮಾಡಿದೆ. ಈ ಬೆಳವಣಿಗೆ ರೈತರಲ್ಲಿ ತುಸು ಸಮಾಧಾನವನ್ನು ನೀಡಿದೆ.

ನೀರಾವರಿ ಇಲಾಖೆ ಅಧಿಕಾರಿಗಳು 6,000 ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಬಿಡುಗಡೆ ಮಾಡಿದ್ದರಿಂದ ಜಲಾಶಯದ ಮಟ್ಟ 2,281 ಅಡಿಯಿಂದ 2,276 ಅಡಿಗೆ ಇಳಿದಿದೆ.

ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ನೀರಾವರಿ ಕಾಲುವೆಗೆ ಬಿಡುಗಡೆ ಮಾಡಬೇಕಿದ್ದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಮಂಡ್ಯ ಜಿಲ್ಲೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಬುಧವಾರ ರಸ್ತೆ ತಡೆದು ಸರಣಿ ಪ್ರತಿಭಟನೆಗಳ ನಡೆಸಿದರು. ರಾಜ್ಯದ ರೈತರಿಗೆ ನೀರು ನೀಡುವ ಬದಲು, ನೆರೆ ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಈ ಮೂಲಕ ರೈತರಿಗೆ ದ್ರೋಹ ಬಗೆದಿದ್ದಾರೆಂದು ಆರೋಪಿಸಿದರು.

ಕರ್ನಾಟಕ ಮತ್ತು ಕೇರಳದ ಕಾವೇರಿ ಕಣಿವೆಯ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್‌ ವೈಫಲ್ಯದಿಂದಾಗಿ 2023-24ರ ಜಲ ವರ್ಷವು ಸಂಕಷ್ಟದ ವರ್ಷವಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು ತನ್ನ ಸಭೆಯಲ್ಲಿ ಜೂನ್‌ ವರೆಗಿನ ಮಳೆಯ ಕೊರತೆಯನ್ನು ಗಮನಿಸಿದೆ. ಆಗಸ್ಟ್‌ 10 ರಂದು 1,5000 ಕ್ಯುಸೆಕ್‌ ನೀರು ಬಿಡಲು ಸೂಚಿಸಿತು. ಇದನ್ನು ರಾಜ್ಯ ಬಲವಾಗಿ ವಿರೋಧಿಸಿದ್ದು, ನೀರಿನ ಪ್ರಮಾಣ 10,000 ಕ್ಯುಸೆಕ್‌ಗೆ ಇಳಿಕೆ ಮಾಡಿದೆ. ಇದರಿಂದ ಅಸಮಾಧಾನಗೊಂಡ ತಮಿಳುನಾಡು ಸುಪ್ರೀಂ ಕೋರ್ಟಿನಲ್ಲಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದು, ಶುಕ್ರವಾರ ಮೂರು ನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

Latest Indian news

Popular Stories