ರೂ. 3 ಕೋಟಿ ಬೆಲೆ ಬಾಳುವ 3 ಕೆ.ಜಿ. ಹೈಡ್ರೋ ಗಾಂಜಾ ವಶ
ಅಂತರರಾಷ್ಟ್ರೀಯ ಮಾದಕ ದ್ರವ್ಯ ಸಾಗಣೆ ಜಾಲವನ್ನು ಬೇಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ತಂಡ ಯಶಸ್ವಿಯಾಗಿದೆ. ಮೂಲತಃ ಕೇರಳ ರಾಜ್ಯದ ಮಹಮ್ಮದ್ ಅನೂಫ್ ಎಂಬಾತ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಕೆಫೆ ಇಟ್ಟುಕೊಂಡಿದ್ದು, ಕಾಸರಗೋಡಿನ ಮೆಹರೂಫ್ ಹಾಗೂ ವಿರಾಜಪೇಟೆಯ ಆರ್ಜಿ ಗ್ರಾಮದ ರವೂಫ್‌ರವರೊಂದಿಗೆ ತಂಡವನ್ನು ಕಟ್ಟಿಕೊಂಡು ಅಲ್ಲಿಂದ ಹೈಡ್ರೋಪೋನಿಕ್ ರೀತಿಯಲ್ಲಿ ಬೆಳೆದಿರುವ ಗಾಂಜಾ (ಹೈಡ್ರೋ ಗಾಂಜಾವನ್ನು) ವಿಮಾನದ ಮೂಲಕ ಭಾರತ ಮತ್ತು ದುಬೈಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದು ಈ ಜಾಲವನ್ನು ಬೇಧಿಸಲಾಗಿದೆ.
ದಿನಾಂಕ 28/09/2024ರಂದು ಮಡಿಕೇರಿ ನಗರದ ಮೂರ್ನಾಡು ರಸ್ತೆಯ ಬಳಿ ಹೈಡ್ರೋ ಗಾಂಜಾ ಸಾಗಿಸುತ್ತಿದ್ದ ಹೆಗ್ಗಳದ ನಾಸಿರುದ್ದೀನ್, ಎಡಪಾಲದ ಯಾಹ್ಯಾ, ಕುಂಜಿಲದ ಅಕನಾಸ್, ಬೇಟೋಳಿಯ ವಾಜೀದ್ ಹಾಗೂ ಕೇರಳದ ಕಣ್ಣೂರಿನ ರಿಯಾಜ್ ಎಂಬವರನ್ನು ವಶಕ್ಕೆ ಪಡೆದು ಅವರಿಂದ ಸುಮಾರು ರೂ. 3 ಕೋಟಿ ಬೆಲೆ ಬಾಳುವ 3 ಕೆ.ಜಿ. ಹೈಡ್ರೋ ಗಾಂಜಾ ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಇನ್ನೋರ್ವ ಆರೋಪಿ ರವೂಫ್‌ನನ್ನು ದಿನಾಂಕ 28/09/2024ರಂದು ಬೆಂಗಳೂರಿನ ಸಂಜಯನಗರ ಲೇಔಟಿನಲ್ಲಿನ ಮನೆಯಲ್ಲಿ ಬಂಧಿಸಲಾಗಿತ್ತು.
ನಂತರ ತನಿಖೆ ಮುಂದುವರೆಸಿದ ಜಿಲ್ಲಾ ಅಪರಾಧ ಪತ್ತೆ ತಂಡವು ಪ್ರಮುಖ ಆರೋಪಿ ಮೆಹರೋಫ್ ಬ್ಯಾಂಕಾಕಿಗೆ ಪರಾರಿಯಾಗಲು ಯತ್ನಿಸುತ್ತಿರುವಾಗ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಕೇರಳದ ಎರ್ನಾಕುಲಂ ಪೊಲೀಸ್ ಮತ್ತು ಇಮಿಗ್ರೇಷನ್ ಅಧಿಕಾರಿಗಳ ಸಹಾಕರದೊಂದಿಗೆ ದಿನಾಂಕ 29/09/2024ರಂದು ಬಂಧಿಸಿದೆ.
ಪ್ರಕರಣವನ್ನು ಬೇಧಿಸುವಲ್ಲಿ ಡಿಸಿಆರ್‌ಬಿ ಘಟಕದ ಅಧಿಕಾರಿ ಸಿಬ್ಬಂದಿಗಳು, ಮಡಿಕೇರಿ ಗ್ರಾಮಾಂತರ ಸಿಪಿಐ, ನಾಪೋಕ್ಲು ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮಡಿಕೇರಿ ನಗರ ವೃತ್ತ ನಿರೀಕ್ಷಕರು ಪಾಲ್ಗೊಂಡಿದ್ದು ಇವರುಗಳ ಕಾರ್ಯ ಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.