ಕೋಲ್ಕತ್ತಾ: ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸಂಜಯ್ ರಾಯ್ ಬಗ್ಗೆ ಪೊಲೀಸ್ ತನಿಖೆಯಿಂದ ಆಘಾತಕಾರಿ ವಿಷಯಗಳು ಬಹಿರಂಗಗೊಂಡಿವೆ.
ರಾಯ್ ಹಿಂಸಾತ್ಮಕ ಅಶ್ಲೀಲ ಚಿತ್ರ ವ್ಯಸನಿ ಎಂಬುದು ಆತನ ಮೊಬೈಲ್ ಪರಿಶೀಲಿಸಿದಾಗ ಕಂಡು ಬಂದಿದೆ. ಆತನ ಮೊಬೈಲ್ ನಲ್ಲಿ ಅತೀ ಹೆಚ್ಚು ಪೋರ್ನ್ ವಿಡಿಯೋಗಳಿವೆ. ಅಂತಹ ವಿಷಯಗಳನ್ನು ನೋಡುವುದು ಅಸಹಜವಾಗಿದ್ದು ಆರೋಪಿಯ ಮನಸ್ಥಿತಿಯ ಬಗ್ಗೆ ಅಚ್ಚರಿಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಸಂಜಯ್ ರಾಯ್ ಆಸ್ಪತ್ರೆಯ ಉದ್ಯೋಗಿ ಅಲ್ಲ. 33 ವರ್ಷದ ಸಂಜಯ್ ರಾಯ್ 2019ರಲ್ಲಿ ಕೋಲ್ಕತ್ತಾ ಪೊಲೀಸ್‌ಗೆ ನಾಗರಿಕ ಸ್ವಯಂಸೇವಕನಾಗಿ ಸೇರಿದ್ದು ಆಸ್ಪತ್ರೆಯ ಔಟ್‌ಪೋಸ್ಟ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದನು. ಕ್ಯಾಂಪಸ್‌ನ ಕಟ್ಟಡಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದನು. ಇನ್ನು ಆಸ್ಪತ್ರೆ ಸಿಬ್ಬಂದಿ ಜತೆ ಸಣ್ಣಪುಟ್ಟ ಕೆಲಸ ಮಾಡುತ್ತಾ, ಸ್ಥಳೀಯ ಪಾರ್ಕಿಂಗ್, ಟ್ರಾಫಿಕ್ ನಿರ್ವಹಣೆ ಮಾಡುತ್ತಿದ್ದನು. ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದರೆ ಹತ್ತಿರದ ನರ್ಸಿಂಗ್ ಹೋಂಗಳಲ್ಲಿ ಬೆಡ್ ಸಿಗುತ್ತದೆ ಎಂದು ರೋಗಿಗಳ ಸಂಬಂಧಿಕರಿಗೆ ವ್ಯವಸ್ಥೆ ಮಾಡಿ ಹಣ ಪಡೆಯುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಾಯ್ ನಾಲ್ಕು ಮದುವೆಯಾಗಿದ್ದ. ಆರೋಪಿಯ ವಿಕೃತ ಕಾಮಕೇಳಿಯಿಂದ ಬೇಸತ್ತ ಮೂವರು ಪತ್ನಿಯರು ಮನೆ ಬಿಟ್ಟು ಹೋಗಿದ್ದಾರೆ. ರಾಯ್ ತನ್ನ ಹೆಂಡತಿಯರನ್ನು ದೈಹಿಕವಾಗಿ ನಿಂದಿಸುತ್ತಿದ್ದನು. ಆತನ ಮೊದಲ ಪತ್ನಿ ಬೆಹಲಾದಿಂದ, ಎರಡನೇ ಪತ್ನಿ ಪಾರ್ಕ್ ಸರ್ಕಸ್‌ನಿಂದ, ಮೂರನೇ ಪತ್ನಿ ಬ್ಯಾರಕ್‌ಪುರದಿಂದ ಹಾಗೂ ನಾಲ್ಕನೇ ಪತ್ನಿ ಅಲಿಪುರದವರಾಗಿದ್ದು ಕಳೆದ ವರ್ಷ ಕ್ಯಾನ್ಸರ್ ರೋಗದಿಂದ ನಾಲ್ಕನೇ ಪತ್ನಿ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಬಾಕ್ಸರ್ ತರಬೇತಿ ಪಡೆದುಕೊಂಡಿದ್ದ ರಾಯ್ ಹಲವು ವರ್ಷಗಳಿಂದ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದನು. ಇದರಿಂದಾಗಿ ಹೀಗಾಗಿ ಕೋಲ್ಕತ್ತಾ ಪೊಲೀಸ್ ಕಲ್ಯಾಣ ಮಂಡಳಿಗೆ ವರ್ಗಾಯಿಸಲಾಯಿತು. ರಾಜ್ಯ-ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಔಟ್ ಪೋಸ್ಟ್ ನಲ್ಲಿ ಕೆಲಸ ಮಾಡುತ್ತಿದ್ದನು. ಹಿರಿಯ ಅಧಿಕಾರಿಗಳು ಮತ್ತು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ರಾಯ್ ಹೆಚ್ಚು ಸಾಮೀಪ್ಯ ಇಟ್ಟುಕೊಂಡಿದ್ದರಿಂದ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಯಾವುದೇ ಅನುಮತಿ ಇಲ್ಲದೆ ಪ್ರವೇಶಿಸುತ್ತಿದ್ದನು. ಆತನನ್ನು ಪ್ರಶ್ನಿಸುವ ಧೈರ್ಯ ಯಾರೂ ಮಾಡುತ್ತಿರಲಿಲ್ಲ.
ಪೊಲೀಸರು ರಾಯ್ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 64 (ಅತ್ಯಾಚಾರ) ಮತ್ತು 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ಪ್ರಭಾವ ಎಷ್ಟಿತ್ತೆಂದರೆ, ಕೋಲ್ಕತ್ತಾ ಪೊಲೀಸ್‌ನ 4ನೇ ಬೆಟಾಲಿಯನ್‌ನ ಬ್ಯಾರಕ್‌ಗೆ ಪ್ರವೇಶ ಪಡೆದಿದ್ದ ಆತ ಅಪರಾಧ ಎಸಗಿದ ನಂತರ ಅಲ್ಲಿಯೇ ಉಳಿದು ಮಲಗಿದ್ದ ಎನ್ನಲಾಗಿದೆ.