ಉಡುಪಿ: ಜಿಲ್ಲೆಯಲ್ಲಿ ಜುಲೈ ಕೊನೆಯ ವಾರದವರೆಗೂ ಅಬ್ಬರಿಸಿದ ಮಳೆಯು ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಮಂಕಾಗಿದೆ. ಜಿಲ್ಲೆಯಾದ್ಯಂತ ಬೇಸಿಗೆಯ ವಾತಾವರಣ ಸೃಷ್ಟಿಯಾಗಿದೆ.
ಆಗಸ್ಟ್ ತಿಂಗಳ ಮೊದಲ ದಿನದಿಂದಲೇ ಕ್ಷೀಣಿಸುತ್ತ ಬಂದ ಮಳೆಯು ಇದೀಗ ಎಲ್ಲಿಯೂ ಕಾಣಿಸದಾಗಿದೆ. ಗಾಳಿಯ ಅಬ್ಬರ, ಮಳೆಯ ಭೀಕರತೆ ಕಣ್ಮರೆಯಾಗಿದೆ.
ಕರಾವಳಿಯಲ್ಲಿಸಮುದ್ರವೂ ಶಾಂತವಾಗಿದೆ. ಮಳೆಗಾಲದ ಮಧ್ಯೆಯೇ ಬೇಸಿಗೆ ವಾತಾವರಣ ಸೃಷ್ಟಿಯಾಗಿದ್ದು, ಜನರು ಫ್ಯಾನ್ ಮೊರೆ ಹೋಗಿದ್ದಾರೆ. ಜತೆಗೆ ಜಿಲ್ಲೆಯಲ್ಲಿಮುಂದಿನ ಒಂದು ವಾರ ಮಳೆಯು ಸುರಿಯುವ ಯಾವುದೇ ಲಕ್ಷಣ ಇಲ್ಲವೆಂದು ಹವಾಮಾನ ಇಲಾಖೆ ವರದಿ ನೀಡಿದೆ.
ಆಗಸ್ಟ್ ತಿಂಗಳಿನಲ್ಲಿ ಮೀನುಗಾರಿಕೆ ಪ್ರಾರಂಭವಾದ ಮರುದಿನವೇ ತೂಫಾನ್ ಬಂದು ಬೋಟುಗಳು ಲಂಗರು ಹಾಕುತ್ತಿದ್ದ ದೃಶ್ಯಗಳು ಕಂಡುಬರುತ್ತಿದ್ದವು. ಆದರೆ, ಈ ಬಾರಿ ಮಳೆ ಹಾಗೂ ತೂಫಾನುಗಳು ಇಲ್ಲದೇ ಉತ್ತಮ ಮೀನುಗಾರಿಕೆ ನಡೆಯುತ್ತಿದೆ.