ರಾಜ್ಯ ಅಬಕಾರಿ ಇಲಾಖೆಯಲ್ಲಿ ಬಹಳಷ್ಟು ಬೆಳವಣಿಗೆಗಳಾಗುತ್ತಿವೆ. ಇತ್ತೀಚೆಗೆ ಸ್ಕಾಚ್ಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡುವ ಬಗ್ಗೆ ಅಬಕಾರಿ ಇಲಾಖೆ ಮಾಹಿತಿ ನೀಡಿತ್ತು. ಇದೀಗ ಮದ್ಯ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಬರುವ ಬಾರ್, ಹೋಟೆಲ್, ಕ್ಲಬ್, ಸ್ಟಾರ್ ಹೋಟೆಲ್‌ಗಳು ಮತ್ತು ಬೋರ್ಡಿಂಗ್ ಹೌಸ್‌ಗಳಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ (Karnataka Government) ಅವಕಾಶ ನೀಡಿದೆ.
ವ್ಯಾಪಾರ, ವಾಹಿವಾಟು ಸುಧಾರಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯ ಬಾರ್, ಕ್ಲಬ್ ಸೇರಿದಂತೆ ಇತರ ವ್ಯಾಪಾರ ಸಂಸ್ಥೆಗಳಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ತೆರೆದಿರಲು ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿಯಲ್ಲಿ ನಡೆದ 2024–25ನೇ ಸಾಲಿನ ಬಜೆಟ್ ಭಾಷಣೆಯಲ್ಲಿ ಈ ಬಗ್ಗೆ ಘೋಷಿಸಿದ್ದರು. ಅದರಂತೆ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ವಿಸ್ತರಿಸಲಾಗಿದೆ ಎಂದು ಜುಲೈ 29ರಂದೇ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಬಿಬಿಎಂಪಿ ಮಿತಿಯಲ್ಲಿರುವ ಮದ್ಯ ವ್ಯಾಪಾರ ಸಂಸ್ಥೆಗಳಿಗೆ ಮಾತ್ರ ಈ ಆದೇಶ ಅನ್ವಯಿಸಲಿದೆ. ಈ ನಿರ್ಧಾರ ರಾಜ್ಯ ಸರ್ಕಾರಕ್ಕೆ ತನ್ನ ಆದಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಗರದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿರುವ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ (BBHA), ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.
ಇನ್ನು ಬಿಬಿಎಚ್‌ಎ ಅಧ್ಯಕ್ಷ ಪಿಸಿ ರಾವ್ ಮಾತನಾಡಿ, ವ್ಯಾಪಾರ ಸಮಯವನ್ನು 1 ಗಂಟೆಗೆ ವಿಸ್ತರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದರಿಂದ ಬೆಂಗಳೂರಿನ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿರ್ಧಾರದಿಂದ ಹೆಚ್ಚಿನ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳು ಮಧ್ಯರಾತ್ರಿ 1 ಗಂಟೆಯವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಆದರೆ, ಕೆಲವು ನೆಟ್ಟಿಗರು ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಇದು ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುತ್ತದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.