ಲೋಕಸಭೆಯಲ್ಲಿ ಭದ್ರತಾ ಲೋಪ: ಕಲರ್ ಸ್ಮೋಕ್’ನ ಸ್ಟಿಕ್ ತೋರಿಸಲು ಜಗಳವಾಡಿಕೊಂಡ ಪತ್ರಕರ್ತರು

ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಒಳಗೆ ನುಗ್ಗಿ ‘ಕಲರ್ ಸ್ಮೋಕ್’ ಬರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮೂಲದ ಓರ್ವ ಯುವಕ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.

ಈ ನಡುವೆ ಕಲರ್ ಸ್ಮೋಕ್‌ನ ಅವಶೇಷವನ್ನು ತೋರಿಸಲು ರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರು ನೇರಪ್ರಸಾರದಲ್ಲೇ ಜಗಳಾಡಿಕೊಂಡ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ವೈರಲಾಗಿದೆ.

‘ಕಲರ್ ಸ್ಮೋಕ್’ ವಸ್ತುವನ್ನು ಮೊದಲು TV9 ಹಿಂದಿ ಚಾನೆಲ್‌ನ ವರದಿಗಾರ ಮನೀಷ್ ಎಂಬುವವರು ಕೈಯಲ್ಲಿ ಹಿಡಿದು ಕ್ಯಾಮೆರಾಕ್ಕೆ ತೋರಿಸುತ್ತಿದ್ದಂತೆಯೇ, ಬಂದ ಇನ್ನೋರ್ವ ಪತ್ರಕರ್ತ ಕಸಿಯಲು ಯತ್ನಿಸಿದ್ದಾನೆ. ಇದೇ ವೇಳೆ ನಾಲ್ಕೈದು ಪತ್ರಕರ್ತರೂ ದಾಳಿ ನಡೆಸಿದ್ದಾರೆ. ಈ ಗುಂಪಿನಲ್ಲಿ ನ್ಯೂಸ್‌ 18 ಸಂಸ್ಥೆಯ ಪತ್ರಕರ್ತೆ ಪಲ್ಲವಿ ಘೋಷ್ ಕೂಡ ಸೇರಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಗಂಭೀರ ಪ್ರಕರಣವಾದಾಗಲೂ ‘ನಮ್ಮಲ್ಲೇ ಮೊದಲು ತೋರಿಸುವ ಹಪಾಹಪಿಗೆ ಪತ್ರಿಕೋದ್ಯಮ ಬಡವಾಗುತ್ತಿದೆ. ಇದು ಗೋದಿ ಮೀಡಿಯಾಗಳ ಇಂದಿನ ಅವಸ್ಥೆ. ನಾಚಿಕೆಯಾಗಬೇಕು’ ಎಂದು ನೆಟ್ಟಿಗರು ವಿಡಿಯೋ ಹಂಚಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಈ ಬೆಳವಣಿಗೆಯ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲೂ ಕೂಡ ಸೆರೆಹಿಡಿದಿದ್ದು, ಪತ್ರಕರ್ತರ ಅವಸ್ಥೆಗೆ ಬಿದ್ದು ಬಿದ್ದು ನಗಾಡಿದ್ದಾರೆ.

ವಿಡಿಯೋ ವೈರಲಾದ ಬಳಿಕ ಟ್ವೀಟ್ ಮಾಡಿರುವ ಪಲ್ಲವಿ ಘೋಷ್, “ಇದರಲ್ಲಿ ನಾಚಿಕೆಯಾಗುವಂಥದ್ದೇನಿಲ್ಲ. ಗ್ರೌಂಡ್‌ನಲ್ಲಿ ಕೆಲಸ ಮಾಡಲು ಬನ್ನಿ, ಆಗ ಗೊತ್ತಾಗುತ್ತದೆ ಎಷ್ಟು ಕಷ್ಟ ಇದೆ ಎಂಬುದು” ಸಮರ್ಥನೆ ಮಾಡಿಕೊಂಡಿದ್ದಾರೆ.

Latest Indian news

Popular Stories